ವಿಜಯಪುರ : ಸಾಮಾಜಿಕ ಪಿಡುಗು ವರದಕ್ಷಣೆಗೆ ಬಂಜಾರ ಸಮುದಾಯದಲ್ಲಿ ಇದೀಗ ಬ್ರೇಕ್ ಹಾಕಲಾಗಿದೆ. ಲಂಬಾಣಿ ತಂಡಗಳನ್ನು ವರದಕ್ಷಿಣೆ ಮುಕ್ತ ಮಾಡುವ ಸಂಕಲ್ಪ ಹೊಂದಿದ್ದು ವಿಜಯಪುರ ಜಿಲ್ಲೆಯ 331 ತಾಂಡಾಗಳ ನಾಯಕರು ಕಾರಭಾರಿಗಳು ಹಾಗೂ ಸ್ವಾಮೀಜಿಗಳಿಂದ ಇಂದು ಮಹತ್ವದ ಸಭೆ ನಡೆಯಿತು.
ವಿಜಯಪುರದ ಬಂಜಾರ ಭವನದಲ್ಲಿ ನಡೆದ ಸಭೆಯಲ್ಲಿ ಈ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಯಿತು. ಮದುವೆಗಳಲ್ಲಿ ವರದಕ್ಷಿಣೆ ಪಡೆಯುವುದು ಮತ್ತು ನೀಡುವುದಕ್ಕೆ ನಿಷೇಧ. ಯಾವುದೇ ಕಾರಣಕ್ಕೂ ವರದಕ್ಷಿಣೆ ಪಡೆಯಬಾರದೆಂದು ನಿರ್ಧಾರ ಕೈಗೊಳ್ಳಲಾಯಿತು. ವರದಕ್ಷಿಣೆಯಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
ಮಗಳ ಮದುವೆಗಾಗಿ ಸಾಲದ ಸುಳಿಯಲ್ಲಿ ಕುಟುಂಬಗಳು ಸಿಲುಕುತ್ತಿವೆ. ವಿಜಯಪುರ ಜಿಲ್ಲೆಯ 350ಕ್ಕೂ ಹೆಚ್ಚು ತಾಂಡಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿತ್ತು. ಇದೀಗ ಎಲ್ಲಾ ತಂಡಗಳಲ್ಲಿ ವರದಕ್ಷಿಣೆ ಪದ್ಧತಿ ನಿರ್ಮೂಲನೆಗೆ ಮುಖಂಡರು ಪಣತೊಟ್ಟಿದ್ದಾರೆ. ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಮಾಜದ ಶ್ರೀಗಳು ಕರೆ ನೀಡಿದ್ದಾರೆ.








