ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಪುನರ್ ವಿಂಗಡಣೆ (Delimitation) ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿರಲಿದ್ದು, ಯಾವುದೇ ರಾಜ್ಯ ಅಥವಾ ವರ್ಗಕ್ಕೆ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದರು.
ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಎದ್ದಿರುವ ಆತಂಕಗಳನ್ನು ದೂರ ಮಾಡಿದ ಪ್ರಧಾನಿ, “ಈ ನಿರ್ಧಾರದ ಪ್ರಕ್ರಿಯೆಯು ಯಾರಿಗೂ ತಾರತಮ್ಯ ಮಾಡುವುದಿಲ್ಲ. ಇದು ಅತ್ಯಂತ ಜವಾಬ್ದಾರಿಯುತ ಮತ್ತು ನ್ಯಾಯಯುತವಾದ ಹೆಜ್ಜೆಯಾಗಿದೆ” ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸದೀಯ ಇತಿಹಾಸದ “ಅತ್ಯಂತ ಪ್ರಮುಖ ಕ್ಷಣ” ಎಂದು ಬಣ್ಣಿಸಿದ ಅವರು, ಇದು ಭಾರತದ ಭವಿಷ್ಯವನ್ನು ರೂಪಿಸುವ ನಿರ್ಧಾರ ಎಂದರು.
ಈ ಮಸೂದೆಯ ಯಶಸ್ಸು ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಬದಲಿಗೆ ಇಡೀ ದೇಶಕ್ಕೆ ಸೇರಿದ್ದು. “ಇದರ ಕ್ರೆಡಿಟ್ ನನಗಾಗಲಿ ಅಥವಾ ನನ್ನ ಪಕ್ಷಕ್ಕಾಗಲಿ ಬೇಡ, ಇದನ್ನು ಬೆಂಬಲಿಸುವ ಎಲ್ಲರಿಗೂ ಈ ಗೌರವ ಸಲ್ಲುತ್ತದೆ” ಎಂದು ವಿರೋಧ ಪಕ್ಷಗಳಿಗೆ ತಿಳಿಸಿದರು.
25-30 ವರ್ಷಗಳ ಹಿಂದೆಯೇ ಜಾರಿಯಾಗಬೇಕಿದ್ದ ಈ ಮಸೂದೆಯು ವಿಳಂಬವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಈಗ ಇದನ್ನು ಜಾರಿಗೊಳಿಸಲು ಸುಸಮಯ ಬಂದಿದೆ ಎಂದರು.
ಮಹಿಳೆಯರ ಹಕ್ಕನ್ನು ವಿರೋಧಿಸುವವರನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ರಾಜಕೀಯ ಲಾಭ-ನಷ್ಟಗಳಿಗಿಂತ ದೇಶದ ಅಭಿವೃದ್ಧಿ ಮುಖ್ಯ ಎಂದು ಅವರು ಪ್ರತಿಪಾದಿಸಿದರು.








