ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸದ್ಯಕ್ಕೆ ನಡೆಯುತ್ತಿರುವ ಮತ ಎಣಿಕೆ ಪ್ರಕ್ರಿಯೆ ಹಾಗೂ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ನೀಡಲು ಶುಕ್ರವಾರ ನಿರಾಕರಿಸಿದೆ.
ಇಂತಹ ಚುನಾವಣಾ ವಿವಾದಗಳನ್ನು ‘ಚುನಾವಣಾ ನ್ಯಾಯಮಂಡಳಿ’ (Election Tribunal) ಎದುರೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ಪೀಠವು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಕೀಲೆ ಹೇಮಾ ಕರಿಯಪ್ಪ ಗೌಡ ಅವರು ಖುದ್ದಾಗಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಮಾರ್ಚ್ 11, 2026 ರಂದು ರಾಜ್ಯಾದ್ಯಂತ 23 ಸ್ಥಾನಗಳಿಗಾಗಿ ನಡೆದಿದ್ದ ಕೆಎಸ್‌ಬಿಸಿ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಗಂಭೀರ ಆರೋಪಗಳು:
ಅರ್ಜಿದಾರರಾದ ಹೇಮಾ ಕರಿಯಪ್ಪ ಗೌಡ ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನಡಾವಳಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಹಲವು ಆಘಾತಕಾರಿ ಅಂಶಗಳನ್ನು ಕೋರ್ಟ್ ಮುಂದೆ ಇಟ್ಟಿದ್ದರು:
-
ಲಂಚ ಮತ್ತು ಪಾರ್ಟಿ: ಚುನಾವಣೆಯ ವೇಳೆ ಮತದಾರರನ್ನು ಸೆಳೆಯಲು ಹಲವು ಅಭ್ಯರ್ಥಿಗಳು ಹಣ, ಉಡುಗೊರೆಗಳನ್ನು ಹಂಚಿದ್ದಾರೆ ಹಾಗೂ ಅನಧಿಕೃತ ಪಾರ್ಟಿಗಳನ್ನು ಆಯೋಜಿಸಿದ್ದಾರೆ.
-
ಒಂದೇ ಕೈಬರಹದ ಮತಗಳು: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದ ಮತಗಟ್ಟೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಯೊಬ್ಬರ ಪರವಾಗಿ ಚಲಾವಣೆಯಾದ ‘ಮೊದಲ ಪ್ರಾಶಸ್ತ್ಯದ’ ಮತಗಳು ಒಂದೇ ಕೈಬರಹ ಮತ್ತು ಶಾಯಿಯಲ್ಲಿ ಮಾರ್ಕ್ ಆಗಿದ್ದವು.
-
ಹೆಚ್ಚುವರಿ ಮತದಾನ: ಔರಾದ್ ಮತಗಟ್ಟೆಯಲ್ಲಿ ಕೇವಲ 47 ನೋಂದಾಯಿತ ವಕೀಲರಿದ್ದರೂ ಬರೋಬ್ಬರಿ 53 ಮತಗಳು ಚಲಾವಣೆಯಾಗಿವೆ!
-
ಕರೆಂಟ್ ಕಟ್ ಅಕ್ರಮ: ಬಾಗಲಕೋಟೆ ಮತಗಟ್ಟೆಯಲ್ಲಿ ಅಕ್ರಮ ಎಸಗಲು ಅನುಕೂಲವಾಗುವಂತೆ ಉದ್ದೇಶಪೂರ್ವಕವಾಗಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಈ ಎಲ್ಲಾ ಕಾರಣಗಳಿಂದಾಗಿ, ಫಲಿತಾಂಶ ಪ್ರಕಟಿಸುವ ಮುನ್ನ ಈ ದೂರುಗಳನ್ನು ಕೇಂದ್ರ ಚುನಾವಣಾ ನ್ಯಾಯಮಂಡಳಿಗೆ ವಹಿಸಬೇಕು ಮತ್ತು ರಾಜ್ಯದ ಎಲ್ಲಾ 194 ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಕೋರ್ಟ್‌ಗೆ ಹಾಜರುಪಡಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಬಾರ್ ಕೌನ್ಸಿಲ್ ವಾದವೇನು?
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು ಅರ್ಜಿಯನ್ನು ಬಲವಾಗಿ ವಿರೋಧಿಸಿದರು:
-
ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಬೇಡ: ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಹೈಕೋರ್ಟ್ ಅದರಲ್ಲಿ ಹಸ್ತಕ್ಷೇಪ ಮಾಡಬಾರದು. ಫಲಿತಾಂಶ ಪ್ರಕಟವಾದ ಬಳಿಕ ನಿಯಮಾನುಸಾರ ಚುನಾವಣಾ ನ್ಯಾಯಮಂಡಳಿಯಲ್ಲೇ ಇದನ್ನು ಪ್ರಶ್ನಿಸಬೇಕು.
-
ಸುಪ್ರೀಂ ಕೋರ್ಟ್ ಆದೇಶ: ಸುಪ್ರೀಂ ಕೋರ್ಟ್ ಈಗಾಗಲೇ ಮೇ 18, 2026 ರ ಆದೇಶದ ಪ್ರಕಾರ ಇಂತಹ ವಿವಾದಗಳ ಶೀಘ್ರ ಇತ್ಯರ್ಥಕ್ಕಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ದೀಪಕ್ ಗುಪ್ತಾ ಮತ್ತು ಜಸ್ಟಿಸ್ ಹಿಮಾ ಕೊಹ್ಲಿ ನೇತೃತ್ವದಲ್ಲಿ ನ್ಯಾಯಮಂಡಳಿ ರಚಿಸಿದೆ. ಮಧ್ಯಂತರ ಪರಿಹಾರ ನೀಡುವ ಅಧಿಕಾರವೂ ಈ ಮಂಡಳಿಗೆ ಇದೆ.
-
ದೂರುಗಳು ವಜಾ ಆಗಿವೆ: ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಅಂತಿಮ ಹಂತ ತಲುಪಿದೆ. ಅರ್ಜಿದಾರರು ನೀಡಿದ್ದ ದೂರುಗಳನ್ನು ಚುನಾವಣಾ ಅಧಿಕಾರಿಯಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಮೇ 12, 2026 ರಂದೇ ಪರಿಶೀಲಿಸಿ ವಜಾಗೊಳಿಸಿದ್ದಾರೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಟ್ರಾಂಗ್ ರೂಂನಲ್ಲಿ ಸೀಲ್ ಮಾಡಿ ಸುರಕ್ಷಿತವಾಗಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೋರ್ಟ್ ಆದೇಶ:
“ಚುನಾವಣಾ ಪ್ರಕ್ರಿಯೆಯ ಮಧ್ಯೆ ಮತ ಎಣಿಕೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ” ಎಂದು ಮೌಖಿಕವಾಗಿ ಹೇಳಿದ ನ್ಯಾಯಪೀಠವು, ತಕ್ಷಣದ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದಾಗ್ಯೂ, ಚುನಾವಣಾ ಪ್ರಕ್ರಿಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಅರ್ಜಿದಾರರು ಕೋರಿರುವ ಹಿನ್ನೆಲೆಯಲ್ಲಿ, ಮುಂದಿನ ವಿಚಾರಣೆಯನ್ನು ಜೂನ್ 1 ಕ್ಕೆ ಮುಂದೂಡಿದೆ.
ಬಾರ್ ಕೌನ್ಸಿಲ್ ಪರವಾಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಮತ್ತು ವಕೀಲ ಚೈತನ್ಯ ಎಸ್.ಜಿ. ಹಾಜರಾಗಿದ್ದರೆ, ಉನ್ನತಾಧಿಕಾರ ಚುನಾವಣಾ ಸಮಿತಿ (HPEC) ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ರೂನ್ ವಾದ ಮಂಡಿಸಿದರು.
Sleep Expert: ‘ಲವ್‌ಮೇಕಿಂಗ್’ಗೆ ಬೆಸ್ಟ್ ಟೈಮ್ ಯಾವುದು? ಇಲ್ಲಿದೆ ವೈಜ್ಞಾನಿಕ ಮಾಹಿತಿ!








