ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ವಿವಿ ಚಾನ್ಸಲರ್ ಆಗಿ ರಾಜ್ಯಪಾಲರಿಗೆ ಇದ್ದಂತ ಅಧಿಕಾರವನ್ನು ಮೊಟಕಗೊಳಿಸಿ, ಮುಖ್ಯಮಂತ್ರಿಗೆ ನೀಡುವುದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ರಾಜ್ಯಪಾಲರಿಗೆ ಮರು ಪ್ರಾಸಿಕ್ಯೂಷನ್ ಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದಷ್ಟೇ ಅಲ್ಲದೇ ಇನ್ನೂ ಏನೇನು ನಿರ್ಧಾರ ಕೈಗೊಳ್ಳಲಾಯಿತು ಎನ್ನುವ ಪ್ರಮುಖ ಹೈಲೈಟ್ಸ್ ಮುಂದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಂದಿ ಒಂಭತ್ತು ಬಿಲ್ ಗಳನ್ನ ಸಂಪುಟ ಅಂಗೀಕರಿಸಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ, 20:40: 20 ಇದ್ದ ಕಲ್ಯಾಣ ನಿಧಿ ರೂಪ 50:100: 50,ವಿಧಾನಕ್ಕೆ ಬದಲಾಗಲಿದೆ. ಕಂಪನಿ ಕಡೆ ವ್ಯಾಲ್ಯೂ ಹೆಚ್ಚು ಸಿಗಲಿದೆ ಎಂದರು.
ಕರ್ನಾಟಕ ಅಂತರ್ಜಲ ನಿಯಮಾವಳಿ ಅಭಿವೃದ್ಧಿ ಹಾಗೂ ನಿಯಮಾವಳಿ ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ. ಕೊಳವೆ ಬಾವಿ ಕೊರೆದು ನೀರು ಸಿಗದ ಸನ್ನಿವೇಶದಲ್ಲಿ ಅಂತಹ ಬೋರ್ ಗಳನ್ನ ಮುಚ್ಚೋದನ್ನ ಕಡ್ಡಾಯಗೊಳಿಸುವ ನಿಯಮ ಜಾರಿಗೊಳಿಸಲಾಗುತ್ತದೆ ಎಂದರು.
ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕ 2024ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಖಾಸಗಿ ಯೂನಿವರ್ಸಿಟಿಗೆ ಸರ್ಕಾರಿ ಅಧಿಕಾರಿ ನಿಯೋಜನೆಗೆ ಅವಕಾಶ ಮಾಡಿಕೊಡಲಿದೆ. ಉಳಿದ ವಿವಿಗಳಲ್ಲಿ ಈ ನಿಯಮ ಪಾಲನೆಯಲ್ಲಿತ್ತು. ಆದರೆ ಚಾಣಕ್ಯ ದಲ್ಲಿ ಈ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಈ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯಪಾಲರ ಬದಲು ಸಿಎಂ ಅವರನ್ನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿವಿ ಗೆ ಚಾನ್ಸಲರ್ ಆಗಿ ನಿಯೋಜಿಸುವ ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಯುನಿವರ್ಸಿಟಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ರಾಜ್ಯಪಾಲರು ಇಷ್ಟು ದಿನ ಚಾನ್ಸೆಲರ್ ಆಗಿದ್ದರು. ಸಿಎಂ ಇನ್ನು ಮುಂದೆ ಚಾನ್ಸಲರ್ ಆಗಲಿದ್ದಾರೆ. ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಮುಖ್ಯಮಂತ್ರಿಗಳಿಗೆ ನೀಡುವುದಕ್ಕೆ ಕ್ಯಾಬಿನೆಟ್ ಅನುಮೋದಿಸಿದೆ ಎಂದರು.
ಕರ್ನಾಟಕ ಪ್ರವಾಸೋಧ್ಯಮ ರೋಪ್ ವೇ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ರೋಪ್ ವೇ ಕಾರ್ಯ ಯೋಜನೆ ಹಾಗೂ ಸುರಕ್ಷತಾ ಜವಾಬ್ದಾರಿ ಹೊಣೆಗಾರಿಕೆಯನ್ನ ಒಳಗೊಂಡ ವಿಧೇಯಕವಾಗಿದೆ. ರಾಜ್ಯದ 12 ಕಡೆ ರೋಪ್ ವೇ ನಿರ್ಮಾಣದ ತಯಾರಿ ನಡೆದಿದೆ ಎಂದರು.
ಲಲಿತ್ ಮಹಲ್ ಹೋಟೆಲ್ ನಿರ್ವಹಣೆಗೆ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಲಾಗಿದೆ. ಸರ್ಕಾರದ ಬದಲು ಮುಂದೆ ಖಾಸಗಿಯವರಿಂದ ಹೊಟೇಲ್ ನಿರ್ವಹಣೆಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಈಗ ಕೆಎಸ್ ಟಿಡಿಸಿ ಹಾಗೂ ಅರಣ್ಯ ಇಲಾಖೆ ಇದರ ನಿರ್ವಹಣೆ ಮಾಡಲಾಗ್ತಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲರನ್ನ ಕೋರಲು ನಿರ್ಧರಿಸಲಾಗಿದೆ. ಬಿಎಸ್ ವೈ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದ ದೂರು. 2020ರ ನವೆಂಬರ್ ನಲ್ಲಿ ಟಿ ಜೆ ಅಬ್ರಹಾಂ ಎಸಿಬಿಗೆ ದೂರು ನೀಡಿದ್ರು. ಕ್ರಮಕ್ಕೆ ರಾಜ್ಯಪಾಲರನ್ನ ಕೋರಿದ್ರು. ಅದರೆ ಗವರ್ನರ್ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈಗ ಸರ್ಕಾರ ಇದರ ತನಿಖೆಗೆ ಒಪ್ಪಿಗೆ ನೀಡುವಂತೆ ಗವರ್ನರ್ ಗೆ ಮರು ಮನವಿ ಮಾಡಲು ನಿರ್ಧಾರಿಸಲಾಗಿದೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ