ಶಿವಮೊಗ್ಗ : ಮಾರಿಕಾಂಬಾ ಜಾತ್ರೆ ಅಂಗವಾಗಿ ಹೆಲಿ ಟೂರಿಸಂ ಹಾಗೂ ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಇದು ಹೊಸ ಮನರಂಜನೆ ನೀಡಲಿದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಹೊರತರಲಾಗಿರುವ ಮೂರು ವರ್ಷದ ಮಾಹಿತಿಯನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಜಾತ್ರೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಜೊತೆಗೆ ಇಂತಹ ಜನಾಕರ್ಷಕ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಾಗರದ ಮಾರಿಕಾಂಬ ದೇವಿ ಜಾತ್ರೆ ತಯಾರಿ ಭರದಿಂದ ನಡೆಯುತ್ತಿದ್ದು ಎಲ್ಲ ಸಮಿತಿಗಳು ತಮ್ಮ ಕೆಲಸವನ್ನು ನಿರ್ವಹಿಸಿ ಜಾತ್ರೆ ಯಶಸ್ಸಿಗೆ ಟೊಂಕ ಕಟ್ಟಿ ಕೆಲಸ ಮಾಡುತ್ತಿವೆ. ಜಾತ್ರೆ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡ ಹಾಗೂ ಖಾಸಗಿ ಕಟ್ಟಡಗಳ ಕಾಂಪೋಡ್‌ಗಳಿಗೆ ಸುಣ್ಣಬಣ್ಣ ಮಾಡಲಾಗುತ್ತಿದೆ. ಸಾರ್ವಜನಿಕರು ಸಹ ನಮ್ಮೊಂದಿಗೆ ಎಲ್ಲ ಕೆಲಸಗಳಿಗೆ ಸಹಕಾರ ನೀಡುತ್ತಿದ್ದಾರೆ. ಊರು ಪ್ರವೇಶ ಮಾಡುವ ಕಡೆಗಳಲ್ಲಿ ಬೃಹತ್ ಸ್ವಾಗತ ಕಮಾನುಗಳನ್ನು ಹಾಕುವ ನಿಟ್ಟಿನಲ್ಲಿ ಗಮನ ಹರಿಸಿದೆ ಎಂದು ಹೇಳಿದರು.
ಸಾಗರ ನಗರ ವ್ಯಾಪ್ತಿಯಲ್ಲಿ ತುರ್ತು ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಕೆಲವು ಜಾಗಗಳನ್ನು ಗುರುತಿಸಿದ್ದು ಅವುಗಳನ್ನು ಅಭಿವೃದ್ದಿಪಡಿಸಿ ವಾಹನ ನಿಲ್ಲಿಸಲು ಸೌಲಭ್ಯ ಒದಗಿಸಲಾಗುತ್ತದೆ. ಗೋಪುರ ಬಣ್ಣ ಬಹುತೇಕ ಮುಗಿದಿದ್ದು ಜಾತ್ರೆ ಹಿನ್ನೆಲೆಯಲ್ಲಿ ಕರೆಯಬೇಕಾಗಿದ್ದ ಟೆಂಡರ್‌ಗಳು ಮುಗಿದಿದೆ. ಜನರಿಗೆ ಹಾಗೂ ಹೊರ ಊರುಗಳಿಂದ ಬರುವ ಭಕ್ತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಾತ್ರೆ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ಹೊರಗೆ ತಂದ ಕ್ಯಾಲೆಂಡರ್ ಸುಂದರವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಈ ವೇಳೆ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾದಂತ ನಾಗೇಂದ್ರ ಕೆ.ಎನ್., ಸುಂದರ ಸಿಂಗ್, ಗಿರಿಧರ ರಾವ್, ನಾಗೇಂದ್ರ ಕುಮಟಾ, ತಾರಾಮೂರ್ತಿ, ರವಿ ನಾಯ್ಡು, ಟಿ.ವಿ.ಪಾಂಡುರಂಗ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಹೇಮಂತ್, ಗಣೇಶ್ ಶೇಟ್ ಇನ್ನಿತರರು ಹಾಜರಿದ್ದರು.
BJP ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ
BREAKING: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ








