ಬೆಂಗಳೂರು: ಹಿರಿಯರು ಸಮಾಜಕ್ಕೆ ಮಾರ್ಗದರ್ಶಕರು. ಅವರಿಗೆ ಗೌರವ ಕೊಡುವ ಉದ್ದೇಶದಿಂದಲೇ ರಾಜ್ಯದಲ್ಲಿ 50.69 ಲಕ್ಷ ಮಂದಿಗೆ ಮಾಸಾಶನ ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 63 ವೃದ್ಧಾಶ್ರಮಗಳನ್ನು ತೆರೆಯಲಾಗಿದ್ದು, 1,575 ಹಿರಿಯ ನಾಗರಿಕರು ಆಶ್ರಯ ಪಡೆದಿದ್ದಾರೆ. ಇನ್ನೂ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಹಿರಿಯರಿಗಾಗಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ, ಅವರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಮಾಡುವ ಬಗ್ಗೆ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ʼಗ್ಯಾರಂಟಿʼ ಯಿಂದ ಹಿರಿಯರಿಗೆ ಅನುಕೂಲ
ನಮ್ಮ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಗ್ಯಾರಂಟಿ ಯೋಜನೆಗಳಿಂದ ಹಿರಿಯ ನಾಗರಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯಡಿ ನಮ್ಮ ಹಿರಿಯ ತಾಯಿಂದಿರರು ಕೂಡ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ, ಇದು ಸಂತಸದ ಸಂಗತಿ ಆಗಿದೆ ಎಂದರು.
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ 10. 47 ಕೋಟಿ ರೂ.
ರಾಜ್ಯದಲ್ಲಿ ಸದ್ಯ 57 ಲಕ್ಷದ 91 ಸಾವಿರ ಹಿರಿಯ ನಾಗರಿಕರಿದ್ದಾರೆ. ಇಲಾಖೆಗೆ 2024 -25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 10 ಕೋಟಿ 47 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಿದೆ. ಈ ಮೂಲಕ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಅಶಕ್ತ ಮತ್ತು ನಿರ್ಗತಿಕ ಹಿರಿಯ ನಾಗರಿಕರಿಗಾಗಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ರಾಜ್ಯದೆಲ್ಲೆಡೆ 63 ವೃದ್ಧಾಶ್ರಮಗಳನ್ನು ತೆರೆದಿದೆ. ಸದ್ಯ 1 ಸಾವಿರದ 575 ಮಂದಿ ಅಶಕ್ತ ಹಿರಿಯ ನಾಗರಿಕರು ಆಶ್ರಯ ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದಲೂ ನಡೆಸುತ್ತಿರುವ ವೃದ್ಧಾಶ್ರಯಗಳಲ್ಲೂ ಹಿರಿಯ ನಾಗರಿಕರಿದ್ದಾರೆ. ಇನ್ನೂ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಸಹಾಯವಾಣಿ ಸಿಬ್ಬಂದಿಗೆ ಗೌರವ ಧನ ಹೆಚ್ಚಳ
ಹಿರಿಯ ನಾಗರಿಕರಿಗಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಿಬ್ಬಂದಿಗೆ ಶೇ.50ರಷ್ಟು ಗೌರವ ಧನ ಹೆಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
‘ಶಕ್ತಿ ಯೋಜನೆ’ಯಲ್ಲಿ ಮಹತ್ವದ ಮಲ್ಲಿಗಲ್ಲು: ರಾಜ್ಯದಲ್ಲಿ 300 ಕೋಟಿ ಮಹಿಳೆಯರು ‘ಉಚಿತ ಬಸ್ ಪ್ರಯಾಣ’ | Shakti Scheme
ಗಮನಿಸಿ : ಆಧಾರ್ ಕಾರ್ಡ್ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ