ಬೆಂಗಳೂರು : ನನ್ನ ಫೋನ್ ಹಾಗೂ ನನ್ನ ಜೊತೆಗೆ ಇರುವಂತಹ 45 ಜನರ ಫೋನ್ ಗಳನ್ನು ಸರ್ಕಾರ ಟ್ಯಾಪ್ (ಫೋನ್ ಕದ್ದಾಲಿಕೆ) ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರಕಾರದ ವಿರುದ್ಧ ಗಂಭೀರವಾದಂತಹ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಮುಗಿಸಲು ಈ ರೀತಿ ಷಡ್ಯಂತರ ಮಾಡುತ್ತಿದ್ದಾರೆ. ನಾನು ಅಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದು ನನ್ನ ಮೇಲೆ ನಡೆಯುತ್ತಿದೆ. ಹಾಗಾಗಿ ನಾನು ಹಾಗೂ ನನ್ನ ಜೊತೆ ಇದ್ದವರ ಸುಮಾರು 45 ಜನರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.
ಈ ಒಂದು ಪ್ರಕರಣದಿಂದ ನೊಂದು ನಮ್ಮ ತಂದೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋಕೆ ಹೊರಟಿದ್ದರು. ನಾನು ನಮ್ಮ ತಂದೆಗೆಯವರಿಗೆ ಹೇಳಿದೆ ನೀವ್ಯಾಕೆ ಯಾರೋ ಮಾಡಿದ ತಪ್ಪಿಗೆ ರಾಜೀನಾಮೆ ಕೊಡುತ್ತೀರಿ? ರಾಜ್ಯದ ನೀರಾವರಿ ಸಮಸ್ಯೆಗೆ ನೀವು ರಾಜೀನಾಮೆ ಕೊಡಬಾರದು ಅಧಿಕಾರದಲ್ಲಿ ಇರಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಪ್ರಜ್ವಲ್ ಬಂದು ಶರಣಾಗು
ಇನ್ನು ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜ್ವಲ್ ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು. ಮಾಧ್ಯಮದ ಮೂಲಕ ಪ್ರಜ್ವಲ ರೇವಣ್ಣಗೆ ನಾನು ಮನವಿ ಮಾಡುತ್ತೇನೆ.ಈ ನೆಲದ ಕಾನೂನು ಇದೆ ಯಾಕೆ ಹೆದರಬೇಕು? ಎಷ್ಟು ದಿನ ಕಳ್ಳ ಪೊಲೀಸ್ ಆಟ? ನನ್ನ ಹಾಗೂ ಎಚ್ ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ಬಂದು ಶರಣಾಗು. ನೀನಗೆ ಕೈಮುಗಿದು ಮನವಿ ಮಾಡುತ್ತೇನೆ.24 ಗಂಟೆ ಇಲ್ಲವೇ 48 ಗಂಟೆಯಲ್ಲಿ ಬಂದು ಶರಣಾಗು ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.