ಬೆಂಗಳೂರು: ಜೆಡಿಎಸ್ ನ ( JDS Party ) ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಗುರುವಾರ ಬಸವನಗುಡಿಯ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ ಮಾಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಇಂದು ಬೆಳಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ರಥಯಾತ್ರೆಗೆ ಚಾಲನೆ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿದೆ. ಗುರುವಾರ ಅತ್ಯಂತ ಒಳ್ಳೆಯ ದಿನವಾಗಿದೆ. 1994ರಲ್ಲಿ ದೇವೇಗೌಡರು ಕೂಡ ಇಲ್ಲಿ ಪೂಜೆ ನಡೆಸಿ ಚುನಾವಣೆಗೆ ಹೋಗಿದ್ದರು ಎಂದರು.
ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆಯಲ್ಲಿ ಪಂಚರತ್ನ ರಥಯಾತ್ರೆ ಪೂರ್ಣ ಪ್ರಮಾಣದಲ್ಲಿ ಶುರುವಾಗಲಿದೆ. ಅಂದು ಅಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ, ಅಂದರೆ ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತಿದೆ. ಗಾಂಧಿನಗರದಲ್ಲಿ ಸಾಂಕೇತಿಕವಾಗಿ ರಥಯಾತ್ರೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ಮಾಡಲಾಗುತ್ತದೆ ಎಂದು ಹೇಳಿದರು.
Viral Video: ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು; ಮುಂದೇನಾಯ್ತು ಗೊತ್ತಾ?
ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ನೀಡಲಾಗುತ್ತಿದೆ. ನೆಮ್ಮದಿಯ ಬದುಕನ್ನು ನೀಡಲು ಬುನಾದಿ ಈ ಕಾರ್ಯಕ್ರಮ. ಈಗಾಗಲೇ ಸಂಭವನೀಯ ಅಭ್ಯರ್ಥಿಗಳು ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.
ನಮ್ಮ ಕುಟುಂಬವನ್ನು ಮತ್ತು ತಂದೆಯವರನ್ನು ಕಾಪಾಡಿದ್ದೆ ಶಿವ. ದೇವೇಗೌಡರಿಗೆ ರಕ್ಷಣೆ ಕೊಟ್ಟಿದ್ದು, ಅನಾರೋಗ್ಯಕ್ಕೆ ಒಳಗಾದಗಲೂ ಮರು ಜೀವ ಕೊಟ್ಟಿದ್ದು ಶಿವ. ಹಾಗಾಗಿ, ಶಿವನಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು ಮಾಜಿ ಮುಖ್ಯಮಂತ್ರಿಗಳು.
ರಥಯಾತ್ರೆ, ಗ್ರಾಮ ವಾಸ್ತವ್ಯ ಕೂಡ ಮಾಡಲಾಗುತ್ತದೆ. ಇವತ್ತು ನಮ್ಮ ಪಕ್ಷಕ್ಕೆ ಇದು ಸವಾಲು. ರಾಷ್ಟ್ರೀಯ ಪಕ್ಷಗಳು ಜನರ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ನಾನು ಹಿಂದೆ ರೈತರ ಸಾಲ ಮನ್ನ ಮಾಡಿದ್ದೆ. ಆಗಲೂ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಮಾತನಾಡಿದ್ದವು. ಕಾಂಗ್ರೆಸ್ ನಾಯಕರಿಗೆ ಈಗ ಅಪ್ಪರ್ ಭದ್ರ ಬಗ್ಗೆ ಕಾಳಜಿ ಬಂದಿದೆ. ಐದು ವರ್ಷ ಸರ್ಕಾರ ಇದ್ದಾಗ ಏನು ಮಾಡಿದ್ರು. ಈಗ ಜನರಿಗೆ ನೀರು ಕೊಡ್ತಾರಾ ಇವರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೇರೆ ಪಕ್ಷದ ಪಾದಯಾತ್ರೆ ಬಗ್ಗೆ ಭಯ ಇಲ್ಲ. ಇವರ ಪಾದಯಾತ್ರೆ ನೋಡುತ್ತಿದ್ದೇವೆ. ಕಾಂಗ್ರೆಸ್ ನಾಯಕರ ಈ ರೀತಿ ಕಾರ್ಯಕ್ರಮ ಐದು ವರ್ಷ ಇದ್ದಾಗ ಮಾಡದೇ ಇದ್ದವರು ಈಗ ಮಾಡುವುದರಿಂದ ಏನು ಮಾಡೋದು. ಇದು ಚುನಾವಣೆ ಸ್ಟಂಟ್ ಅಷ್ಟೆ ಎಂದು ಅವರು ತಿಳಿಸಿದರು.
ಇನ್ನು ಎಸ್ ಟಿ ಸಮಾಜಕ್ಕೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಗಂಡೆದೆ ಮುಖ್ಯಮಂತ್ರಿ ಅಂತ ಮಾತಿನಲ್ಲಿ ಹೇಳಿದರೆ ಸಾಲಲ್ಲ. ಇಷ್ಟು ದಿನ ಆ ಸಮುದಾಯದ ಸ್ವಾಮೀಜಿಯನ್ನು ಯಾಕೆ ಧರಣಿ ಕೂರಿಸಿದ್ರಿ? ಎಂದು ಪ್ರಶ್ನಿಸಿದರಲ್ಲದೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟಾಂಗ್ ನೀಡಿದರು.
ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್, ಬಾಗೇಗೌಡ, ಅರಮನೆ ಶಂಕರ್ ಇತರ ಮುಖಂಡರು ಭಾಗವಹಿಸಿದ್ದರು.