ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನವನ್ನು ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ನವನೀತ್ ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಫೆಬ್ರವರಿ 28 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಹೇಮಂತ್ ಸೊರೆನ್ ಅವರನ್ನು ಬಂಧಿಸಿರುವ ಪ್ರಕರಣವು ನಿಗದಿತ ಅಪರಾಧವಲ್ಲ ಮತ್ತು ಅವರ ವಿರುದ್ಧ ಯಾವುದೇ ಅಕ್ರಮ ಹಣ ವರ್ಗಾವಣೆ ಪ್ರಕರಣವಿಲ್ಲ ಎಂದು ಅವರ ಪರವಾಗಿ ವಾದಿಸಲಾಯಿತು.
ಬಾಗ್ದಾಯಿ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಸೊರೆನ್ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಮತ್ತು ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಆಗಿನ ಸಿಎಂ ಹೇಮಂತ್ ಸೊರೆನ್ ಅವರ ವಿರುದ್ಧ ಸಮನ್ಸ್ ಹೊರಡಿಸಿದ ನಂತರ ತಮ್ಮ ಅಧಿಕಾರ ಮತ್ತು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಇಡಿ ವಾದಿಸಿತು.
ವಿಶೇಷವೆಂದರೆ, ಫೆಬ್ರವರಿ 28 ರಂದು ಜಾರ್ಖಂಡ್ ಹೈಕೋರ್ಟ್ ತನ್ನ ಆದೇಶಗಳನ್ನು ಕಾಯ್ದಿರಿಸಿದ ನಂತರ ತೀರ್ಪು ನೀಡಲು ವಿಳಂಬದ ವಿರುದ್ಧ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದಲ್ಲಿ ತೀರ್ಪು ಬರದ ಕಾರಣ, ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.