ಚಿಕ್ಕಬಳ್ಳಾಪುರ: ಪ್ರಪಂಚವನ್ನೇ ನೋಡದ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗುವಿನ ಸಾವನ್ನು ಅನಾರೋಗ್ಯ ಎಂದು ಬಿಂಬಿಸಿ ನಾಟಕವಾಡಿದ್ದ ಅಜ್ಜಿ ಮೆಹಬೂಬಿ, ಎಫ್‌ಎಸ್‌ಎಲ್ (FSL) ವರದಿಯಿಂದಾಗಿ ಅಂತಿಮವಾಗಿ ಪೊಲೀಸರ ಅತಿಥಿಯಾಗಿದ್ದಾಳೆ.
ಘಟನೆಯ ಹಿನ್ನೆಲೆ:
2025ರ ಡಿಸೆಂಬರ್ 24ರಂದು ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ಮೆಹಬೂಬಿ ಎಂಬಾಕೆಯ ಮೊಮ್ಮಗಳು ಅನ್ಯಧರ್ಮದ ಯುವಕನನ್ನು ಪ್ರೇಮವಿವಾಹವಾಗಿದ್ದಳು. ಬಾಣಂತನಕ್ಕಾಗಿ ಅಜ್ಜಿಯ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಈಕೆಯ 40 ದಿನದ ಗಂಡು ಮಗು ನಿಗೂಢವಾಗಿ ಸಾವನ್ನಪ್ಪಿತ್ತು. “ಮಗುವಿಗೆ ಉಸಿರಾಟದ ಸಮಸ್ಯೆ ಇತ್ತು” ಎಂದು ನಂಬಿಸಿದ ಅಜ್ಜಿ, ಗುಟ್ಟಾಗಿ ಮಗುವಿನ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಳು.
ಸಾವಿನ ರಹಸ್ಯ ಬಯಲಾಗಿದ್ದು ಹೇಗೆ?
ಅಜ್ಜಿಯ ನಡವಳಿಕೆಯ ಮೇಲೆ ಅನುಮಾನಗೊಂಡ ಸ್ವಂತ ಮೊಮ್ಮಗಳೇ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮಣ್ಣು ಮಾಡಿದ್ದ ಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇತ್ತೀಚೆಗೆ ಬಂದ ಎಫ್‌ಎಸ್‌ಎಲ್ ವರದಿಯಲ್ಲಿ ಮಗುವನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.
ಹತ್ಯೆಗೆ ಕಾರಣವೇನು?
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಅಜ್ಜಿ ಮೆಹಬೂಬಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಹತ್ಯೆಗೆ ಪ್ರಮುಖವಾಗಿ ಎರಡು ಕಾರಣಗಳನ್ನು ನೀಡಿದ್ದಾಳೆ:
-
ಅಂತರಧರ್ಮೀಯ ವಿವಾಹ: ಮೊಮ್ಮಗಳು ಅನ್ಯಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು ಅಜ್ಜಿಗೆ ಇಷ್ಟವಿರಲಿಲ್ಲ.
-
ಜವಾಬ್ದಾರಿಯ ಭಯ: ಮಗುವನ್ನು ಮುಂದಿನ ದಿನಗಳಲ್ಲಿ ಸಾಕಿ ಸಲಹುವ ಜವಾಬ್ದಾರಿ ತನಗೆ ಬೇಡ ಎಂಬ ಅಸಹನೆ.
ಕಾನೂನು ಕ್ರಮ:
ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೆಹಬೂಬಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಗುವನ್ನು ಮಣ್ಣು ಮಾಡಿದ ಎರಡು ತಿಂಗಳ ನಂತರ ಅಜ್ಜಿಯ ಪಾಪದ ಕೊಡ ತುಂಬಿದ್ದು, ಮಗುವನ್ನು ಕಳೆದುಕೊಂಡ ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ








