ಬೆಂಗಳೂರು: ಕೋರ್ಟ್ ಅನುಮತಿ ಮೇರೆಗೆ ನಾನು ಶಾರ್ಜಾ ಪ್ರವಾಸ ಕೈಗೊಂಡು, ಮರಳಿದ್ದೇನೆ. ಅಲ್ಲಿ ಭಾರತೀಯ ಸಂಘದವರು 51ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಭಾರತೀಯರು ಹಾಗೂ ಕನ್ನಡ ಸಂಘಟನೆ ಸದಸ್ಯರು ರಾಜ್ಯದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿ ನಮ್ಮವರು ಅಲ್ಪಸಂಖ್ಯಾತರು. ಅವರು ಅಲ್ಲಿ ಬದುಕಿ, ಸಂಪಾದಿಸಿ ಇಲ್ಲಿಗೆ ಹಣ ಕಳುಸುತ್ತಿದ್ದಾರೆ. ಇಲ್ಲಿ ಉದ್ಯೋಗ ಸೃಷ್ಟಿಸಬೇಕಿದ್ದ ಸಮೂಹ ಬಹಳ ಆತಂಕದಿಂದ ಹೊರದೇಶಗಳಿಗೆ ವಲಸೆ ಹೋಗುತ್ತಿವೆ. ಇಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಕಿರುಕುಳದಿಂದ ನೊಂದು ಅಲ್ಲಿಗೆ ಸ್ಥಳಾಂತರ ಆಗುತ್ತಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ಅಲ್ಲಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ವಿಶೇಷ ಸಚಿವಾಲಯ ಸ್ಥಾಪಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಬಹಳ ಉತ್ತಮ ನೆರವು ನೀಡಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಲ್ಲಿರುವ ಕನ್ನಡಿಗರ ಬೇಸರವೇನೆಂದರೆ, ಕೋವಿಡ್ ಸಮಯದಲ್ಲಿ ಅವರು ತವರಿಗೆ ಹಿಂದಿರುಗಲು ಯತ್ನಿಸಿದಾಗ ಅವರನ್ನು ಇಲ್ಲಿಗೆ ಬರಬೇಡಿ ಎಂದು ಹೇಳುವ ಮೂಲಕ ಅವರ ಮನಸ್ಸು ನೋಯಿಸಿದ್ದಾರೆ. ಅವರು ತಮ್ಮ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಅವರ ಬೇಡಿಕೆಗಳನ್ನು ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ವಿಶ್ವದ ಯಾವುದೇ ಭಾಗದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ, ಅವರ ಜತೆ ಸಂಪರ್ಕ ಸಾಧಿಸಲು ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಮಾತು ನೀಡಿ ಬಂದಿದ್ದೇನೆ ಎಂದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕ್ರಮವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಹೇಳಿದ್ದೇನೆ. ರಾಜ್ಯದ ಒಂದೊಂದು ತಾಲೂಕಿನಿಂದಲೇ ಸಾವಿರಾರು ಜನ ತೆರಳಿ ಅಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೂ ಅನೇಕರು ಅಲ್ಲಿ ದುಡಿಯುತ್ತಿದ್ದಾರೆ. ಅವರು ತಮ್ಮ ತಾಯ್ನಾಡಿನ ಸೇವೆ ಸಲ್ಲಿಸಲು ಉತ್ಸುಕರಾಗಿದ್ದು, ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಅನಿವಾಸಿ ಕನ್ನಡಿಗರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆಗೆ, ‘ಸರ್ಕಾರ ಅವರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರಕ್ಕೆ ಇದುವರೆಗೂ ಒರ್ವ ಪ್ರತಿನಿಧಿಯನ್ನು ನೇಮಿಸಲು ಸಾಧ್ಯವಾಗಿಲ್ಲ. ಕೇರಳ ಈ ವಿಚಾರದಲ್ಲಿ ಬಹಳ ಕಾಳಜಿ ವಹಿಸಿದೆ. ಅನಿವಾಸಿ ಕನ್ನಡಿಗರು ಅಲ್ಲಿ ಕೆಲಸ ಮಾಡಿ ದೇಶಕ್ಕೆ ಸಂಪತ್ತು ತಂದುಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಕೆಲವರು ಇಲ್ಲಿನ ಅನೇಕರಿಗೆ ಉದ್ಯೋಗ ಕೊಟ್ಟಿದ್ದಾರೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಭೇಟಿ ಮಾಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಹಾಗೂ ವಿಶ್ವನಾಥ್ ಇಬ್ಬರೂ ಶ್ರೀನಿವಾಸ್ ಪ್ರಸಾದ್ ಅವರ ಕೈಕೆಳಗೆ ಯೂತ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೇವೆ. ಆಗಿನಿಂದಲೂ ನಾವು ಹಲವು ಸರ್ಕಾರಗಳಲ್ಲಿ ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರಿಗೆ ಸಾಕಷ್ಟು ಅನುಭವ, ಆಲೋಚನೆಗಳಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಹಿತಕ್ಕಾಗಿ ಏನೆಲ್ಲಾ ಅಗತ್ಯವಿದೆ ಎಂದು ಚರ್ಚೆ ಮಾಡಿದ್ದೇವೆ. ಆತ್ಮೀಯತೆ ಮೇರೆಗೆ ನನ್ನನ್ನು ಭೇಟಿ ಮಾಡಿದ್ದಾರೆ. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದಾಗ ಮೊದಲು ಹೈದರಾಬಾದ್ ಕರ್ನಾಟಕ ಭಾಗದ ಶಾಲೆಗಳಲ್ಲಿ ಜಾರಿಗೆ ತಂದಿದ್ದರು. ರಾಜ್ಯದ ಹಿತಕ್ಕಾಗಿ ಚರ್ಚೆ ಮಾಡಿದ್ದೇವೆ. ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ’ ಎಂದು ತಿಳಿಸಿದರು.
ಬಿಜೆಪಿಯವರು ಅವರನ್ನು ಬಿಟ್ಟುಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರ ಪಕ್ಷದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಪಕ್ಷದ ವಿಚಾರದ ಬಗ್ಗೆ ಮಾತ್ರ ಗಮನಹರಿಸುತ್ತೇನೆ’ ಎಂದು ತಿಳಿಸಿದರು.
ವಿಶ್ವನಾಥ್ ಅವರು ತಮ್ಮ ಆಪ್ತರೊಂದಿಗೆ ಮತ್ತೆ ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮ್ಮ ಊಹಾಪೋಹಗಳು ನಮಗೆ ಬೇಡ. ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ಮಸ್ಕಿ, ಹೊಸಕೋಟೆಯಲ್ಲಿ ಪಕ್ಷ ಬಿಟ್ಟು ಹೋದವರ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಹೀಗೆ ಒಬ್ಬರು ಖಾಲಿಯಾದರೆ ಆ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ವಿ.ಎಸ್ ಪಾಟೀಲ್, ಯು.ಬಿ ಬಣಕಾರ್ ಅವರು ಪಕ್ಷಕ್ಕೆ ಸೇರಿದ್ದಾರೆ. ಜೆಡಿಎಸ್ ನಿಂದ ಸೋತವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ. ಏನೂಬೇಕಾದರೂ ಸಾಧ್ಯವಾಗಬಹುದು’ ಎಂದು ತಿಳಿಸಿದರು.
ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವುದು ಪಕ್ಷಕ್ಕೆ ಹಿನ್ನಡೆಯಾಗುವುದೇ ಎಂಬ ಪ್ರಶ್ನೆಗೆ, ‘ಆ ರೀತಿ ಆಗುವುದಿಲ್ಲ. ಎಲ್ಲರೂ ಮತದಾರರ ಪಟ್ಟಿ ಪರಿಶೀಲಿಸುತ್ತಿದ್ದಾರೆ. ನಾವು ಈ ವಿಚಾರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ’ ಎಂದರು.
ಬಂಡವಾಳ ಹೂಡಿಕೆ ವಿಚಾರ ಪ್ರಸ್ತಾಪಿಸಿದಾಗ, ‘ಅನಿವಾಸಿ ಕನ್ನಡಿಗರಿಗೆ ಉತ್ತಮ ಆಡಳಿತದ ಭರವಸೆ ನೀಡಿದ್ದು, ಅವರು ಸಂಪಾದನೆ ಹಣವನ್ನು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದೇನೆ. ಸರ್ಕಾರದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮಂಗಳೂರು, ಉಡುಪಿ ಭಾಗದಲ್ಲಿ ಎಷ್ಟು ಹೂಡಿಕೆಯಾಗಿದೆ ಎಂಬ ಪಟ್ಟಿಯನ್ನು ಸಚಿವ ನಿರಾಣಿ ಅವರು ನೀಡಲಿ ಎಂದು ಬೊಮ್ಮಾಯಿ ಅವರು ಸೂಚಿಸಲಿ’ ಎಂದು ತಿಳಿಸಿದರು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದೇ ಎಂಬ ಪ್ರಶ್ನೆಗೆ, ‘ನಾವು ಗುಜರಾತಿನಲ್ಲಿ ಹೆಚ್ಚಿನ ಕ್ಷೇತ್ರಗಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲಿಯೂ ಆಪರೇಶನ್ ಕಮಲ ಮಾಡಿ ಚುನಾವಣೆ ಮಾಡಿದ್ದರು. ಹಿಮಾಚಲ ಪ್ರದೇಶ ಚುನಾವಣೆಯು ಭ್ರಷ್ಟಾಚಾರ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಮ್ಮ ನಾಯಕರೆಲ್ಲರೂ ಅಲ್ಲಿ ಉತ್ತಮ ಪ್ರಚಾರ ಮಾಡಿದ್ದಾರೆ. ಅಲ್ಲಿನ ಮತದಾರರು ಒಬ್ಬೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿಯೂ ಅದು ಮರುಕಳಿಸಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದರು.
ಹಿಮಾಚಲ ಪ್ರದೇಶದಲ್ಲಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ, ‘ಅವರು ಪ್ರಯತ್ನಿಸಲಿ, ಅವರಿಗೆ ಶುಭಕೋರುತ್ತೇನೆ’ ಎಂದರು.
ಶಿವಮೊಗ್ಗ: ಡಿ.13ರಂದು ‘ಸಹ್ಯಾದ್ರಿ ಕಲಾ ಕಾಲೇಜಿ’ನಲ್ಲಿ ‘ಉದ್ಯೋಗ ಮೇಳ’ | Job Fair
ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ತಿಂಗಳಿಗೆ 2 ಬಾರಿ ಇಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಪ್ರಶ್ನೆಗೆ, ‘ಅವರು ದಿನ ನಿತ್ಯ ಇಲ್ಲೇ ಪ್ರಚಾರ ಮಾಡಲಿ. ಕೇವಲ 2 ದಿನ ಯಾಕೆ. ಅವರು ತಾರಾ ಪ್ರಚಾರಕರಾಗಿದ್ದು, ಇಲ್ಲೇ ವಾಸ್ತವ್ಯ ಹೂಡಲಿ. ಅವರು ಪ್ರಧಾನಮಂತ್ರಿಗಳಾಗಿದ್ದು, ಅವರ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡೋಣ. ಕಳೆದ ಬಾರಿ 10% ಸರ್ಕಾರ ಎಂದು ಹೇಳಿದ್ದರು, ಈಗ ಅವರ ಸರ್ಕಾರ 40% ಆಗಿದೆ’ ಎಂದು ಹೇಳಿದರು.
ಗುಬ್ಬಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ನಿಲ್ಲುವ ಹೇಳಿಕೆ ಬಗ್ಗೆ ಕೇಳಿದಾಗ, ‘ಪಕ್ಷಕ್ಕೆ ಅನುಕೂಲ ಆಗುವ ರೀತಿ ನಾವು ಟಿಕೆಟ್ ನೀಡುತ್ತೇವೆ. ಯಾರು ಯಾವ ಬಂಡಾಯ ಬೇಕಾದರೂ ಏಳಲಿ. ನಾವು ಪ್ರತಿಯೊಬ್ಬರ ಅರ್ಹತೆ ಮೇಲೆ ನಿರ್ಧರಿಸುತ್ತೇವೆ’ ಎಂದರು.
ಉದಯಪುರ ನಿರ್ಣಯದಂತೆ ಈ ಬಾರಿ ಹೊಸಬರಿಗೆ ಆದ್ಯತೆ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಖರ್ಗೆ ಅವರು ಕೂಡ ಹೊಸಬರಿಗೆ ಆದ್ಯತೆ ನೀಡುವ ವಿಚಾರ ಹೊಂದಿದ್ದು, ಅವರು ಆರಂಭದ ದಿನಗಳಲ್ಲೇ ಈ ನಿರ್ಣಯದ ಬಗ್ಗೆ ದೇಶದ ಜನರಿಗೆ ತಿಳಿಸಿದ್ದಾರೆ’ ಎಂದರು.
ಹಿರಿಯರು ಹಾಗೂ ಕುಟುಂಬ ರಾಜಕಾರಣದಲ್ಲಿ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ, ‘ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರು ಕಷ್ಟಪಡುತ್ತಿದ್ದು, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನು ಹೆಚ್ಚಾಗಿದ್ದರೆ ಇನ್ನು ಹೆಚ್ಚಾಗಿ ದುಡಿಯಬಹುದಾಗಿತ್ತು. ನಮ್ಮ ಮುಂದಿರುವ ಸವಾಲಿನ ಬಗ್ಗೆ ಅವರಿಗೂ ಗೊತ್ತಿದೆ. ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. ಬಿಜೆಪಿ ಅವರದು ಡಬಲ್ ಇಂಜಿನ್ ಸರ್ಕಾರ, ಅವರು ಸಾವಿಧಾನಿಕ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ. ಇಲ್ಲಿ ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು. ನಾವು ಒಬ್ಬರೆ ಹೋಗುವುದಾದರೆ ವೇಗವಾಗಿ ಹೋಗಬಹುದು, ನಾವು ದೂರದವರೆಗೂ ಹೋಗಬೇಕಾದರೆ ನಾವು ಎಲ್ಲರ ಜತೆಗೂಡಿ ಸಾಗಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ’ ಎಂದರು.
ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ, ‘ಚಿಕ್ಕಮಗಳೂರಿನಲ್ಲಿ ಹೋಗಿ ಎಲ್ಲರ ಜತೆ ಮಾತನಾಡಿದ್ದೇನೆ. ಪಕ್ಷ ಇದ್ದರಷ್ಟೇ ಅಧಿಕಾರ ಅನುಭವಿಸಬಹುದು. ಪಕ್ಷ ಅಧಿಕಾರಕ್ಕೆ ಬಂದರೆ ನಾವು ಅಧಿಕಾರ ಅನುಭವಿಸಬಹುದು. 350ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಅಧಿಕಾರ ಇದೆ. 75 ಪರಿಷತ್ ಸ್ಥಾನ, 16 ರಾಜ್ಯಸಭಾ ಸ್ಥಾನಗಳಿದ್ದು, ಅರ್ಹತೆಗೆ ತಕ್ಕಂತೆ ಎಲ್ಲರಿಗೂ ನಾವು ಅಧಿಕಾರ ನೀಡುತ್ತೇವೆ. ನಮ್ಮ ಪಕ್ಷದಲ್ಲಿ ಶಾಸಕರಾಗಬೇಕು ಎಂದು ಬಹಳ ಹುರುಪಿನಿಂದ 1350 ಜನ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ದಟ್ಟವಾಗಿದೆ’ ಎಂದರು.
ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಲ್ಲ, ಪಕ್ಷ ಬಿಟ್ಟು ಹೋಗಿರುವವರೇ ಮತ್ತೆ ಬರುತ್ತಾರಾ ಎಂಬ ಪ್ರಶ್ನೆಗೆ, ‘ಹಲವು ಕ್ಷೇತ್ರಗಳಲ್ಲಿ ಅಚ್ಚರಿ ಕಾದಿವೆ. ಕೇವಲ ವಲಸಿಗರ ಬಗ್ಗೆ ಯಾಕೆ ಆಲೋಚಿಸುತ್ತೀರಿ? ಪಾಟೀಲ್, ಯು.ಬಿ ಬಣಕಾರ್, ಮಧುಬಂಗಾರಪ್ಪ, ಶರತ್ ಬಚ್ಚೇಗೌಡ ಅವರು ವಲಸಿಗರೇ?’ ಎಂದು ಕೇಳಿದರು.
ಚಿತ್ರದುರ್ಗದಲ್ಲಿ ದಲಿತರ ಸಮಾವೇಶ ನಡೆಯುತ್ತಿದ್ದು, ದಲಿತ ಸಿಎಂ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಯಾಕೆ ಆಗಬಾರದು? ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರಂತೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆ ಎಂದು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಅವರಿಗೆ ಅರ್ಹತೆ ಹಾಗೂ ಹಿರಿತನ ಎರಡೂ ಇದೆ. ಅವರು ಪಕ್ಷಕ್ಕೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮ ಮನೆ ಆಸ್ತಿ ಅಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಇದೇ ನಮ್ಮ ಪಕ್ಷದ ಶಕ್ತಿ. ವೀರಪ್ಪ ಮೋಯ್ಲಿ, ಧರಂ ಸಿಂಗ್, ಬಂಗಾರಪ್ಪನವರ ಸಮಾಜ ಎಷ್ಟು ಸಂಖ್ಯೆಯಲ್ಲಿತ್ತು? ಹಿಂದುಳಿದ ವರ್ಗದ ಸಮುದಾಯದವರು ಮುಖ್ಯಮಂತ್ರಿಗಳಾಗಿಲ್ಲವೇ? ಗುಂಡೂರಾವ್ ಅವರು ಆಗಿಲ್ಲವೇ? ನಮ್ಮಲ್ಲಿ ಅನೇಕ ಸಮರ್ಥರಿದ್ದಾರೆ. ರಂಗನಾಥ್ ಅವರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆ ಅವರು, ಪರಮೇಶ್ವರ್ ಅವರು ನಮ್ಮ ಪಕ್ಷವನ್ನು ಕಷ್ಟದ ಸಮಯದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಅವರು ದಲಿತರು ಎಂಬುದಕ್ಕಿಂತ ಅವರು ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂದು ಈ ಸ್ಥಾನ ಕೊಟ್ಟಿದೆ. 371ಜೆ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಿದ್ದು ಖರ್ಗೆ ಅವರ ಸಾಧನೆಗೆ ಸಾಕ್ಷಿ. ಇದು ಕೇವಲ ದಲಿತರಿಗೆ ಮಾತ್ರವಲ್ಲ, ಎಲ್ಲ ವರ್ಗದವರಿಗೂ ನೆರವಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಬೇರೆ ಪಕ್ಷಗಳಲ್ಲಿ ಇಂತಹ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.