ಬೆಂಗಳೂರು: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕಾಯ್ದೆ ಜಾರಿಗೆ ತಂದಿತ್ತು. ಆ ಬಳಿಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಈಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಕಿರು(Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ 2025ಕ್ಕೆ ಅಂಕಿತ ನೀಡಿದ್ದಾರೆ. ಹೀಗಾಗಿ ಇನ್ಮುಂದೆ ಅಕ್ರಮ ಮೈಕ್ರೋ ಫೈನಾನ್ಸ್ ದಂಧೆಗೆ ಕಡಿವಾಣ ಬಿದ್ದಂತೆ ಆಗಿದೆ. ಅಲ್ಲದೇ ಕಿರುಕುಳ ನೀಡಿದ್ರೇ ಜೈಲು, ದಂಡ ಫಿಕ್ಸ್ ಆದಂತೆ ಆಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ, 2025 ಇದಕ್ಕೆ 2025 ರ ಮಾರ್ಚ್ ತಿಂಗಳ 24ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025ರ ಕರ್ನಾಟಕ ಅಧಿನಿಯಮ ಸಂಖ್ಯೆ:15 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ ಎಂದಿದೆ.
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು (Organizations) ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಒಂದು ಅಧಿನಿಯಮ.
1. ಸಂಕ್ಷಿಪ್ತ ಹೆಸರು, ಪ್ರಾರಂಭ ಮತ್ತು ಅನ್ವಯ.- (1) ಈ ಅಧಿನಿಯಮವನ್ನು ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 ಎಂದು ಕರೆಯತಕ್ಕದ್ದು,
(2) ಇದು 2025ರ ಫೆಬ್ರವರಿ 12ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
(3) ಈ ಅಧಿನಿಯಮದಲ್ಲಿರುವುದಾವುದೂ, ಆರ್‌ಬಿಐ ಮೂಲಕ ನಿಯಂತ್ರಣಕ್ಕೊಳಪಡುವ ಕಾನೂನು ಬದ್ದ, ನೋಂದಾಯಿತ ಮತ್ತು ನಿಯಂತ್ರಿತ ನಿಕಾಯಗಳಾದ ಬ್ಯಾಂಕುಗಳು(ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಬ್ಯಾಂಕುಗಳ ವ್ಯವಹಾರ ಪ್ರತಿನಿಧಿಗಳನ್ನು ಒಳಗೊಂಡು), ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 11)ರಡಿ ನೋಂದಾಯಿತ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಸಹಕಾರ ಸಂಘಗಳು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 (2000ರ ಕರ್ನಾಟಕ ಅಧಿನಿಯಮ 17)ರಡಿ ನೋಂದಾಯಿತ ಎಲ್ಲಾ ಸೌಹಾರ್ದ ಸೊಸೈಟಿಗಳು ಮತ್ತು ಆರ್‌ಬಿಐ ನೊಂದಿಗೆ ನೋಂದಾಯಿತ ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಗೃಹ ಹಣಕಾಸು ನಿಗಮಗಳಿಗೆ ಅನ್ವಯವಾಗತಕ್ಕದ್ದಲ್ಲ.
(4) ಈ ಅಧಿನಿಯಮದ ಉಪಬಂಧಗಳು ತತ್ಕಾಲದಲ್ಲಿ ಜಾರಿಯಲ್ಲಿರುವ ಅಸ್ತಿತ್ವದಲ್ಲಿನ ಯಾವುದೇ ಕಾನೂನಿನೊಂದಿಗೆ ಮುಂದುವರೆಯತಕ್ಕದು ಮತ್ತು ಅಧ್ಯಾರೋಹಿಯಾಗಿರತಕ್ಕದ್ದಲ್ಲ.
2. ಪರಿಭಾಷೆಗಳು. (1) ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು,-
(ಎ) “ಸಾಲಗಾರ” ಎಂದರೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ಮೌಖಿಕ ಅಥವಾ ಲಿಖಿತ ಕರಾರಿನಡಿ ಷರತ್ತುಗಳು ಮತ್ತು ನಿಬಂಧನೆಗಳೊಂದಿಗೆ, ಯಾವುದೇ ಉದ್ದೇಶಕ್ಕಾಗಿ ಸಾಲದ ರೂಪದಲ್ಲಿ ಹಣವನ್ನು ಪಡೆಯುವ, ಆ ಹಣವನ್ನು ಕೆಲವು ಕಾಲಾವಧಿಯೊಳಗೆ ಮರುಪಾವತಿಸತಕ್ಕ ವ್ಯಕ್ತಿ ಅಥವಾ ಸ್ವಸಹಾಯ ಗುಂಪು (SHG) ಅಥವಾ ಜಂಟಿ ಹೊಣೆಗಾರಿಕೆ ಗುಂಪು (JLG) ಅಥವಾ ವ್ಯಕ್ತಿಗಳ ಗುಂಪು:
(ಬಿ) “ಬಲವಂತದ ಕ್ರಮ” ಎಂದರೆ 8ನೇ ಪ್ರಕರಣದಲ್ಲಿ ವಿವರಿಸಲಾದ ಬಲವಂತದ ಕ್ರಮ;
(ಸಿ) “ಬಡ್ತಿ” ಎಂಬುದು ಈ ಅಧಿನಿಯಮದ ಉಪಬಂಧಗಳಡಿ ಪರಿಭಾಷಿಸಿದ ನಿಬಂಧನೆಗಳ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ನಗದು ಅಥವಾ ಸಂದರ್ಭಾನುಸಾರವಾಗಿ ವಸ್ತುರೂಪದಲ್ಲಿ ಸಾಲಗಾರನಿಗೆ ನೀಡಿದ ಮೊತ್ತದ ಮೇಲಿನ ಲಾಭ ಹಾಗೂ ಅದು ದಿನಕ್ಕೆ, ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ವಿಧಿಸಲಾದ ಬಡ್ಡಿಯನ್ನು ಒಳಗೊಳ್ಳುವುದು
(ಡಿ) “ಸಾಲ” ಎಂದರೆ ಸಾಲಗಾರನಿಗೆ ಬಡ್ಡಿಯ ಮೇರೆಗೆ ಖಚಿತವಾಗಿ ಅಥವಾ ಅನ್ಯಥಾ ನೀಡಲಾದ ಹಣದ ರೂಪದಲ್ಲಿನ ಅಥವಾ ಬೀಜ, ಗೊಬ್ಬರ, ಇತ್ಯಾದಿಗಳಂತಹ ವಸ್ತುರೂಪದಲ್ಲಿನ ಕಿರು ಸಾಲ, ಸಣ್ಣ ಸಾಲ ಮತ್ತು ಮುಂಗಡ ಅಥವಾ ಕೈಸಾಲ.
(ಇ) “ಲೇವಾದೇವಿದಾರ” ಎಂಬುದು ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆಗಳನ್ನು ಒಳಗೊಳ್ಳುವುದು ಹಾಗೂ ದಿನಕ್ಕೆ, ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಲಾಭವನ್ನು ಗಳಿಸಲು ನಗದು ಅಥವಾ ವಸ್ತುರೂಪದಲ್ಲಿ ಸಾಲ ನೀಡುವ ಅಥವಾ ಯಾವುದೇ ಸ್ವರೂಪದ ಹಣಕಾಸು ನೆರವು ನೀಡುವುದನ್ನು ಪ್ರಧಾನ ಅಥವಾ ಪ್ರಾಸಂಗಿಕ ಚಟುವಟಿಕೆಯಾಗಿಸಿಕೊಂಡ ಯಾವುದೇ ಪಾಲುದಾರ ಫರ್ಮು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಅಥವಾ ಡಿಜಿಟಲ್ ಸಾಲನೀಡಿಕೆ ಪ್ಲಾಟ್‌ಫಾರ್ಮ್:
(ಎಫ್) “ನೋಂದಣಿ ಪ್ರಾಧಿಕಾರಿ” ಎಂದರೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ:
ಪರಂತು ರಾಜ್ಯ ಸರ್ಕಾರವು ಅಧಿಸೂಚನೆಯಮೂಲಕ ಅಂಥ ಇತರ ಗೊತ್ತುಪಡಿಸಿದ ಅಧಿಕಾರಿಯನ್ನು ನೋಂದಣಿ ಪ್ರಾಧಿಕಾರಿ ಎಂದು ನೇಮಿಸಬಹುದು;
(ಜಿ) “ಸಮಾಜದ ದುರ್ಬಲ ವರ್ಗ” ಎಂದರೆ ರೈತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವ ಇತರ ವ್ಯಾಪಾರಿಗಳು, ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಅವರ ಮೂಲ ಸೇವೆಗಳಿಗೆ ಕುಗ್ಗಿರುವ ಪ್ರವೇಶಾವಕಾಶದ ಮತ್ತು ಮುಖ್ಯವಾಗಿ ಆರೋಗ್ಯ, ವಸತಿ ನೈರ್ಮಲ್ಯ ಇತ್ಯಾದಿಗಳ ಅಂತರ್ನಿಹಿತ ನಿರ್ಣಾಯಕತೆಗಳ (underlying determinants) ಕಾರಣದಿಂದಾಗಿ ಇತರರಿಗೆ ಹೋಲಿಸಿದಲ್ಲಿ ಅನನುಕೂಲತೆಯಿರುವ ಜನರ ಗುಂಪು ಮತ್ತು ಆರ್ಥಿಕವಾಗಿ ಹಿಂದುಳಿದ, ನಿಯತ ಆದಾಯದ ಮೂಲವಿಲ್ಲದೆ ಜೀವನೋಪಾಯದ ಮಾದರಿಗಳಲ್ಲಿ ಕೆಳಮಟ್ಟದಲ್ಲಿರುವವರು.
2) ಈ ಅಧಿವೇಶನದಲ್ಲಿ ಬಳಸಿರುವ ಆದರೆ ಪರಿಭಾಷಿಸದಿರುವ ಪದಗಳು, ಸಂಬಂಧಪಟ್ಟ ಅಧಿನಿಯಮಗಳು ಮತ್ತು ಅದರಡಿ ರಚಿಸಿದ ನಿಯಮಗಳಲ್ಲಿ ಅನುಕ್ರಮವಾಗಿ ಅವುಗಳಿಗೆ ನೀಡಲಾದ ಅವೇ ಅರ್ಥಗಳನ್ನು ಹೊಂದಿರತಕ್ಕದ್ದು.
3. ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರ ನೋಂದಣಿ.- (1) ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮಗಳು ಅಥವಾ ಪಟ್ಟಣಗಳು, ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿಯ ದರ, ಯುಕ್ತ ಜಾಗರೂಕ ನಿರ್ವಹಣಾ ವ್ಯವಸ್ಥೆ ಮತ್ತು ವಸೂಲಾತಿಯನ್ನು ಜಾರಿಗೊಳಿಸುವ ವ್ಯವಸ್ಥೆ ಹಾಗೂ ಸಾಲ ನೀಡಿಕೆ ಅಥವಾ ನೀಡಲಾದ ಹಣದ ವಸೂಲಾತಿ ಚಟುವಟಿಕೆಯನ್ನು ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ ಹಾಗೂ ಸಾಲಗಾರನ ಹೆಸರು ಮತ್ತು ವಿಳಾಸ, ಸಾಲಗಾರನಿಗೆ ನೀಡಲಾದ ಒಟ್ಟು ಅಸಲು ಮೊತ್ತ, ಸಾಲಗಾರನಿಂದ ಈಗಾಗಲೇ ವಸೂಲು ಮಾಡಲಾದ ಮೊತ್ತ, ಸಾಲಗಾರನಿಂದ ಇನ್ನೂ ವಸೂಲು ಮಾಡಬೇಕಾದ ಬಾಕಿ ಮೊತ್ತ ಹಾಗೂ ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಯಾವಾಗಲೂ ಕಾರ್ಯವಹಿಸತಕ್ಕದೆಂಬ ಲಿಖಿತ ಮುಚ್ಚಳಿಕೆಯನ್ನು ಅದರಲ್ಲಿ ನಿರ್ದಿಷ್ಟಪಡಿಸಿ ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಈ ಅಧಿನಿಯಮದ ಪ್ರಾರಂಭದ ತರುವಾಯ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿಕೆ ವ್ಯವಹಾರವನ್ನು ನಿರ್ವಹಿಸುತ್ತಿರುವ ಅಥವಾ ಅದನ್ನು ಪ್ರಾರಂಭಿಸಲು ಉದ್ದೇಶಿಸಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ನೋಂದಣಿ ಪ್ರಾಧಿಕಾರಿಯಿಂದ ಈ ಅಧಿನಿಯಮದಡಿ ನೋಂದಣಿ ಪಡೆಯದೆ ಯಾವುದೇ ಸಾಲಗಳನ್ನು ಮಂಜೂರು ಮಾಡತಕ್ಕದ್ದಲ್ಲ ಅಥವಾ ಯಾವುದೇ ಸಾಲವನ್ನು ವಸೂಲು ಮಾಡತಕ್ಕದ್ದಲ್ಲ.
(3) ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಒದಗಿಸಲಾದ ವಿವರಗಳನ್ನು ನೋಂದಣಿ ಪ್ರಾಧಿಕಾರಿಯು ಪರಿಶೀಲಿಸತಕ್ಕದ್ದು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟಪಡಿಸಬಹುದಾದಂಥ ವಿಧಾನದಲ್ಲಿ ಒಂದು ವರ್ಷದ ಅವಧಿಗಾಗಿ ನೋಂದಣಿಯನ್ನು ನೀಡತಕ್ಕದ್ದು.
(4) ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು ನೋಂದಣಿಯ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ, 3)ನೇ ಉಪಪಕರಣದಲ್ಲಿ ಉಲ್ಲೇಖಿಸಲಾದ ಒಂದು ವರ್ಷದ ಅವಧಿಯ ಮುಕ್ತಾಯಗೊಳ್ಳುವ ಮೊದಲು, ಅರವತ್ತು ದಿನಗಳೊಳಗಾಗಿ ಎಂದಿದೆ.