ನವದೆಹಲಿ: ದೇಶದ ಹೂಡಿಕೆ ಮಾರುಕಟ್ಟೆ ಮತ್ತು ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ವಿದೇಶಗಳಿಂದ ಬೆಳ್ಳಿ ಆಮದು ಮಾಡಿಕೊಳ್ಳುವುದರ ಮೇಲೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಬೆಳ್ಳಿಯನ್ನು ಇನ್ಮುಂದೆ ‘ಮುಕ್ತ’ (Free) ವಿಭಾಗದಿಂದ ತೆಗೆದು ‘ನಿರ್ಬಂಧಿತ’ (Restricted) ವರ್ಗಕ್ಕೆ ಸೇರಿಸಿ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGFT) ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ದೇಶದ ಆಭರಣ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿದೆ.
ಸರ್ಕಾರದ ಈ ಕಠಿಣ ಕ್ರಮಕ್ಕೆ ಕಾರಣವೇನು?
ದೇಶದ ಹಿತದೃಷ್ಟಿಯಿಂದ ಹಾಗೂ ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಈ ನಿರ್ಧಾರ ತಳೆದಿದೆ.
- ಆಮದು ಪ್ರಮಾಣದಲ್ಲಿ ಭಾರಿ ಏರಿಕೆ: ಇತ್ತೀಚಿನ ತಿಂಗಳುಗಳಲ್ಲಿ ದೇಶಕ್ಕೆ ಹರಿದು ಬರುತ್ತಿದ್ದ ಬೆಳ್ಳಿಯ ಪ್ರಮಾಣ ಮಿತಿಮೀರಿತ್ತು. ವಿಶೇಷವಾಗಿ ಯುಎಇ (UAE) ನಂತಹ ದೇಶಗಳಿಂದ ಕಸ್ಟಮ್ಸ್ ಸುಂಕದ ವಿನಾಯಿತಿಯ ಲಾಭ ಪಡೆದು ಭಾರಿ ಪ್ರಮಾಣದಲ್ಲಿ ಬೆಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.
- ಸ್ಥಳೀಯ ಮಾರುಕಟ್ಟೆ ರಕ್ಷಣೆ: ಅತಿಯಾದ ಆಮದಿನಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತವನ್ನು ತಡೆಯಲು ಮತ್ತು ದೇಶದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ನಿಯಂತ್ರಣದಲ್ಲಿಡಲು ಈ ಕ್ರಮ ಅನಿವಾರ್ಯವಾಗಿತ್ತು.
ಇನ್ಮುಂದೆ ನಿಯಮಗಳೇನು?
ಈ ಹೊಸ ನಿರ್ಧಾರದ ಬೆನ್ನಲ್ಲೇ ಬೆಳ್ಳಿ ಆಮದಿನ ಪ್ರಕ್ರಿಯೆ ಸಂಪೂರ್ಣ ಬದಲಾಗಲಿದೆ:
- ಪರವಾನಗಿ ಕಡ್ಡಾಯ: ಇನ್ಮುಂದೆ ಯಾವುದೇ ವ್ಯಾಪಾರಿ ಅಥವಾ ಸಂಸ್ಥೆ ವಿದೇಶದಿಂದ ಬೆಳ್ಳಿಯನ್ನು ಆಮದು ಮಾಡಿಕೊಳ್ಳಬೇಕಾದರೆ ಸರ್ಕಾರದ ಸೂಕ್ತ ಪರವಾನಗಿ (License) ಪಡೆಯುವುದು ಕಡ್ಡಾಯವಾಗಿದೆ.
- ಆರ್‌ಬಿಐ ನಿಯಮಾವಳಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿದ ನಿಯಮಗಳು ಮತ್ತು ಆಯ್ದ ಬ್ಯಾಂಕುಗಳ ಮೂಲಕ ಮಾತ್ರ ಇನ್ಮುಂದೆ ಬೆಳ್ಳಿ ಆಮದಿಗೆ ಅವಕಾಶ ಸಿಗಲಿದೆ.








