ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ(IPD) ಚಿಕಿತ್ಸೆ ನೀಡುವುದು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ, ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ವಹಿಸಿದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯಲ್ಲಿ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಮರುಹೊಂದಾಣಿಕೆ ಮೂಲಕ 24 ಗಂಟೆಯೂ ಸೇವೆ ಸಿಗುವಂತೆ ಮಾಡಲು ಎಲ್ಲ ಸಿದ್ದತೆ ನಡೆಸುತ್ತಿದೆ. ಜೊತೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕೆಲಸ ಮಾಡುವ ಸರ್ಕಾರಿ ವೈದ್ಯರ ಖಾಸಗಿ ಸೇವೆ ಬಗ್ಗೆ ಮಾತನಾಡಿದ ಸಚಿವರು, ಪ್ರಸ್ತುತ ಸರ್ಕಾರಿ ಆದೇಶಗಳ ಪ್ರಕಾರ, ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿ ನಂತರ (ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗದಂತೆ) ಖಾಸಗಿಯಾಗಿಯೂ ಸೇವೆ ನೀಡಲು ಅನುಮತಿ ಇದೆ ಎಂದರು.
ಇನ್ನು ಮುಂದೆ, ಸರ್ಕಾರಿ ವೈದ್ಯರು ಖಾಸಗಿ ಸೇವೆಯನ್ನು ಹೊರರೋಗಿಗಳಿಗೆ (OPD) ಮಾತ್ರ ನೀಡಬಹುದು ಎಂದು ಆದೇಶ ಮಾಡಲಾಗಿದೆ. ಖಾಸಗಿ ಸೇವೆಯಲ್ಲಿ ಒಳರೋಗಿಗಳಿಗೆ (IPD)ಸೇವೆ ನೀಡುವಂತಿಲ್ಲ ಎಂದು ತಿಳಿಸಿದರು.
ಈ ಆದೇಶ ನೀಡಲು ಕಾರಣ:
ಒಳರೋಗಿಗಳಿಗೆ ನಿರಂತರ ಆರೈಕೆ ಮತ್ತು ನಿಯಮಿತ ಪರೀಕ್ಷೆಯ ಅವಶ್ಯಕತೆ ಇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆಗೆ ಸರ್ಕಾರಿ ವೈದ್ಯರು ಸೇವೆ ಸಲ್ಲಿಸುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ನಿರ್ಲಕ್ಷದಿಂದ ಹಲವು ಸಮಸ್ಯೆಗಳು ಉಂಟಾದ ನಿದರ್ಶನಗಳಿವೆ. ಕೆಲವು ಸಂದರ್ಭಗಳಲ್ಲಿ ಸಾವಿಗೂ ಕಾರಣವಾಗಿವೆ ಎಂದು ಮಾನ್ಯ ಲೋಕಾಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸಾರ್ವಜನಿಕ ಸೇವೆಗೆ ಆದ್ಯತೆ ನೀಡಬೇಕಾದರೆ, ಸರ್ಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಯಂತ್ರಿಸಲು ಶಿಫಾರಸು ಮಾಡಿದೆ.
ಕೇರಳದಂತಹ ಇತರ ರಾಜ್ಯಗಳಲ್ಲಿ ಇದೇ ರೀತಿಯ ನಿರ್ಬಂಧಗಳು ಜಾರಿಯಲ್ಲಿವೆ. ಅಲ್ಲಿ ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆಯಲ್ಲಿ OPD ಸೇವೆಗಳಿಗೆ ಮಾತ್ರ ಅನುಮತಿಸಲಾಗಿದೆ.
ಇವೆಲ್ಲ ಕಾರಣಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ಖಾಸಗಿ ಸೇವೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿಂದಿನ ಎಲ್ಲಾ ಸೂಚನೆಗಳ ಜೊತೆಗೆ ಈ ಆದೇಶವನ್ನು ಹೊರಡಿಸಿದೆ.
ಇನ್ನು ಮುಂದೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ (ಐಪಿಡಿ) ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದು, ಹೊರರೋಗಿ ವಿಭಾಗದಲ್ಲಿ (ಒಪಿಡಿ) ತಮ್ಮ ಕರ್ತವ್ಯದ ಅವಧಿಯ ನಂತರ ಮತ್ತು ನಿಗದಿತ ಕರ್ತವ್ಯಗಳಿಗೆ ಅಡ್ಡಿಯಾಗದಂತೆ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬಹುದಾಗಿದೆ. ಅದರ ವಿವರಗಳನ್ನು ಸರ್ಕಾರಕ್ಕೆ ಘೋಷಿಸಬೇಕು.
ಮೇಲಿನ ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಕಾನೂನಿನಡಿಯಲ್ಲಿ ಅನುಮತಿಸಲಾದ ಕ್ರಮ ಕೈಗೊಳ್ಳಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಕಲಬುರಗಿ ಕೀಟನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಮನ್ನಣೆ: ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್








