ಚಾಮರಾಜನಗರ : ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಮರಾಜನಗರಕ್ಕೆ ಭೇಟಿ ನೀಡಿ, 18,500 ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದರು. ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಪಾರದರ್ಶಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಭರವಸೆ ನೀಡಿದರು.
ಸಚಿವರಾದ ನಂತರ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ ಮಧು ಬಂಗಾರಪ್ಪ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ನಗರದ ಭುವನೇಶ್ವರಿ ವೃತ್ತದಲ್ಲಿ 250 ಕೆ.ಜಿ ತೂಕದ ಸೇಬಿನ ಹಾರವನ್ನು ಹಾಕಿ ಸ್ವಾಗತಿಸಲಾಯಿತು. ಅವರು ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ 13,500 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕೇವಲ 5,428 ಶಿಕ್ಷಕರ ನೇಮಕ ಮಾಡಿಕೊಂಡಿತ್ತು. ನಮ್ಮ ಸರ್ಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬದ್ಧವಾಗಿದೆ. ಶೀಘ್ರದಲ್ಲೇ ಇನ್ನೂ 18,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಿದರು.