ಬೆಂಗಳೂರು : ಬಿಪಿಎಲ್ ಕಾರ್ಡ್ ಪರಿಷ್ಕರಣೆ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಕೆಲವು ಬಿಪಿಎಲ್ ಕಾರ್ಡ್ ಗಳು ರದ್ದಾಗಿರುವ ಹಿನ್ನೆಲೆಯಲ್ಲಿ, ಅಂತಹ ಅರ್ಹ ಫಲಾನುಭವಿಗಳಿಗೆ ಒಂದು ವಾರದಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ಮರುಹಂಚಿಕೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿಲ್ಲ ಆದಾಯ ತೆರಿಗೆದಾರರ ಮಾಹಿತಿ ಪಡೆದು ಅಂಥವರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.ಅಲ್ಲದೆ ಸರ್ಕಾರಿ ನೌಕರರನ್ನು ಪರಿಶೀಲಿಸಿ ಅವರ ಕಾರ್ಡುಗಳನ್ನು ಎಪಿಎಲ್ ಗೆ ಬದಲಾವಣೆ ಮಾಡಲಾಗುತ್ತದೆ. ಇನ್ನು ಬಿಪಿಎಲ್ ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಶೀಘ್ರದಲ್ಲಿ ಕ್ರಮ ಕೈಗೊಂಡು ಅವರಿಗೂ ಅಕ್ಕಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಶೇಕಡ 60ರಷ್ಟು ಬಿಪಿಎಲ್ ಕಾರ್ಡುಗಳು ಇವೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಕೇಂದ್ರದ ಮಾನದಂಡಗಳ ಅನ್ವಯ ಪರಿಷ್ಕರಣೆ ಮಾಡಲಾಗಿದೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ 436 ಕಾರ್ಡ್ ಗಳು ಅನರ್ಹಗೊಂಡಿದ್ದು ಒಟ್ಟು 1,02,509 ಬಿಪಿಎಲ್ ಕಾರ್ಡ್ ಗಳು ಅನರ್ಹಗೊಂಡಿವೆ ಎಂದು ತಿಳಿಸಿದರು.