ಬೆಂಗಳೂರು: ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ 81ಕ್ಕೂ ಹೆಚ್ಚು ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇಕಡಾ 60ರಷ್ಟು ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಹೌದು,ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ರಾಜ್ಯಾದ್ಯಂತ ಇರುವ ಒಂದು ಕೋಟಿಗೂ ಅಧಿಕ ಅಸಂಘಟಿತ ಮತ್ತು ನಿಗದಿತ ವಲಯದ ಕಾರ್ಮಿಕರಿಗೆ ನೇರ ಆರ್ಥಿಕ ಅನುಕೂಲವಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ವೈಜ್ಞಾನಿಕವಾಗಿ ಈ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕ ವಲಯದ ದೀರ್ಘಕಾಲದ ಬೇಡಿಕೆಗೆ ಮಣಿದಿರುವ ಸರ್ಕಾರ, ಇದೇ ಮೊದಲ ಬಾರಿಗೆ ಎಲ್ಲಾ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತಂದಿದೆ.
ವಲಯ-3ರ ಕುಶಲರಹಿತ ಕಾರ್ಮಿಕರು: ಕನಿಷ್ಠ ಮಾಸಿಕ ವೇತನವನ್ನು 19,300 ರೂ. ಗೆ ನಿಗದಿಪಡಿಸಲಾಗಿದೆ.
ವಲಯ-1ರ ಕೌಶಲ್ಯಯುತ ಕಾರ್ಮಿಕರು: ಕನಿಷ್ಠ ಮಾಸಿಕ ವೇತನವನ್ನು 31,100 ರೂ. ಗೆ ನಿಗದಿಪಡಿಸಲಾಗಿದೆ.
ವಲಯಗಳ ಪುನರ್ರಚನೆ: ವೇತನ ಲೆಕ್ಕಾಚಾರವನ್ನು ಸುಲಭಗೊಳಿಸಲು ಈ ಹಿಂದೆ ಇದ್ದ 4 ವಲಯಗಳ ವರ್ಗೀಕರಣವನ್ನು 3 ವಲಯಗಳಿಗೆ ಪರಿಷ್ಕರಿಸಲಾಗಿದೆ.
ಯಾರಿಗೆಲ್ಲ ಅನ್ವಯ?
ಈ ಪರಿಷ್ಕೃತ ವೇತನ ಪಟ್ಟಿಯು ಖಾಸಗಿ ಶಾಲೆ ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ಮತ್ತು ಕೊರಿಯರ್ ಸಂಸ್ಥೆಗಳ ನೌಕರರು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಗೂ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.








