ಬೆಂಗಳೂರು : ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಸಾಧನೆ ತೋರುವ ಸರ್ಕಾರಿ ಶಾಲಾ ಕಾಲೇಜುಗಳ ಕ್ರೀಡಾಟುಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ಒಂದು ಲಕ್ಷ ಅನುದಾನ ನೀಡಲಾಗುವುದೆಂದು ವಿಧಾನ ಪರಿಷತ್ ಸಭಾನಾಯಕರು ಹಾಗೂ ಸಚಿವ ಬೋಸರಾಜು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ ಹಾಗೂ ಶ್ರೀ ಕೆ. ವಿವೇಕಾನಂದ ಇವರು ನಿಯಮ-72ರ ಅಡಿಯಲ್ಲಿ ಕೋರಲಾದ ಗಮನ ಸೆಳೆಯುವ ಸೂಚನೆಗೆ ಸಭಾನಾಯಕರು ಉತ್ತರಿಸುತ್ತಾ ರಾಜ್ಯ ಸರ್ಕಾರವು ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆಯಡಿ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳನ್ನು ಉತ್ತೇಜಿಸಲು 1 ಲಕ್ಷ ರೂಗಳ ಅನುದಾನವನ್ನು ಅವರು ಓದುವ ಶಾಲೆಗಳಿಗೆ ನೀಡಲಾಗುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ 2024-25ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ (ಕ್ರೈಸ್) 159 ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ದೈನಂದಿನ ಅಭ್ಯಾಸಗಳಿಗೆ ಅವಶ್ಯಕವಿರುವ ಕ್ರೀಡಾಸಾಮಗ್ರಿಗಳನ್ನು ಒಂದು ವಸತಿ ಶಾಲೆಗೆ ರೂ.84,010/- ಗಳಂತೆ ಒಟ್ಟು ರೂ.1,33,57,590/- ಗಳ ವೆಚ್ಚದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದರು.