ಬೆಳಗಾವಿ : ಪದವಿ ಮತ್ತು ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ ನೀಡುತ್ತಿರುವ ನಿರುದ್ಯೋಗ ಭತ್ಯೆಯನ್ನು ಪ್ರತಿ ತಿಂಗಳ ಮೊದಲ ವಾರದಲ್ಲೇ ಖಾತೆಗೆ ಜಮಾವಣೆ ಮಾಡಲಾಗುತ್ತಿದ್ದು, ಯಾವುದೇ ವಿಳಂಬದ ಪ್ರಶ್ನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ವಿಧಾನಪರಿಷತ್ ನಲ್ಲಿ ಸೋಮವಾರ ಸ್ಪಷ್ಟಪಡಿಸಿದರು.
ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು ಯುವನಿಧಿ ಹಣ ಜಮೆ ಮಾಡಲಾಗುತ್ತಿದೆ. ಇದುವರೆಗೂ ಯಾವುದೇ ಒಬ್ಬ ವಿದ್ಯಾರ್ಥಿಗೆ ವಿಳಂಬವಾಗಿಲ್ಲ. ವಿಳಂಬವಾಗಿದ್ದರೆ ತಾಂತ್ರಿಕ ಕಾರಣಗಳು ಇರಬಹುದು. ಅದನ್ನು ಪರಿಶೀಲಿಸಿ ಬಾಕಿ ಇರುವ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದರು.
1,45,978 ಪದವೀಧರರಿಗೆ ಪಾವತಿ
ಈವರೆಗೂ 1,81,699 ಪದವೀಧರರು ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುತ್ತಾರೆ. ಈ ಪೈಕಿ 1,45,978 ಪದವೀಧರರಿಗೆ ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ. ಉಳಿದಿರುವ ಪದವೀಧರರ ಭತ್ಯೆಯನ್ನು ಪ್ರಮಾಣಪತ್ರಗಳ ಪರಿಶೀಲನೆ ನಂತರ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
33,721 ವಿದ್ಯಾರ್ಥಿಗಳ ಅಂಕಪಟ್ಟಿ ಪರಿಶೀಲನಾ ಹಂತದಲ್ಲಿದೆ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸೇರಿದಂತೆ ಆಯಾ ಪದವಿ, ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ಲಗತ್ತಿಸಿರಬೇಕು. ಇದನ್ನು ಪರಿಶೀಲಿಸಿದ ನಂತರ ಕ್ರಮಬದ್ಧವಾಗಿದ್ದರೆ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
2023-24ರಲ್ಲಿ ಭರವಸೆ ನೀಡಿದಂತೆ, ಪದವಿ ಮತ್ತು ಡಿಪ್ಲೊಮಾ ಕೋರ್ಸ್ ಮುಗಿಸಿದವರಿಗೆ 6 ತಿಂಗಳ ನಂತರ ನಾವು ನಿರುದ್ಯೋಗ ಭತ್ಯೆ ನೀಡಿದ್ದೇವೆ. ಅದರಂತೆ 2022-23ರಂತೆ ಸರ್ಕಾರಿ ಕಾಲೇಜಿನ 90,159, ಖಾಸಗಿ ಕಾಲೇಜುಗಳ 70,003, 2023-24ರಲ್ಲಿ 101,157ಹಾಗೂ ಖಾಸಗಿ ಕಾಲೇಜುಗಳಿಂದ 65,983 ಸೇರಿದಂತೆ ಸರ್ಕಾರಿ ಕಾಲೇಜಿನ ಒಟ್ಟು 1,91,316 ವಿದ್ಯಾರ್ಥಿಗಳು ಹಾಗೂ ಖಾಸಗಿ ಕಾಲೇಜಿನ 1,35,986 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ.
ನೋಂದಣಿ ಮಾಡಿಕೊಂಡವರೆಲ್ಲರಿಗೂ ಸರ್ಕಾರ ನಿರುದ್ಯೋಗ ಭತ್ಯೆ ನೀಡಲಾಗುವುದಿಲ್ಲ. ಅಂಕಪಟ್ಟಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ನಕಲಿ ಅಂಕಪಟ್ಟಿಗಳಿದ್ದರೆ ತಿರಸ್ಕರಿಸಲಾಗುತ್ತದೆ. ಎಲ್ಲವೂ ಆನ್ ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
Good News: ರಾಜ್ಯದ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್: ಶೀಘ್ರವೇ ಬಡ್ತಿ ಭಾಗ್ಯ – ಸಚಿವ ಮಧು ಬಂಗಾರಪ್ಪ
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut