ಬೆಂಗಳೂರು : ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿಪಡಿಸುವ ನಿಟ್ಟಿನಲ್ಲಿ ಉದ್ಯೋಗದಾತರಿಗೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಗೃಹ ಕಾರ್ಮಿಕರ ಮಸೂದೆ ರೂಪಿಸಲು ಕರ್ನಾಟಕ ಸರ್ಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ.
ಹೌದು ಇನ್ಮುಂದೆ ಗೃಹ ಕೆಲಸಗಳ ಕಾರ್ಮಿಕರ ಸಂಘಟನೆ ಮತ್ತು ಅವರ ಸಾಮಾಜಿಕ ಭದ್ರತೆ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹತ್ವದ ಮಸೂದೆ ರೂಪಿಸುವ ಸುಳಿವು ನೀಡಿದೆ. ಮನೆ ಕೆಲಸದವರ ನೇಮಕ ಮಾಡಿದರೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಬಗ್ಗೆ ಮಸೂದೆ ರೂಪಿಸಲು ಮುಂದಾಗಿದೆ. ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯಂತಹ ಪ್ರಮುಖ ಭದ್ರತೆಗಳನ್ನು ಒದಗಿಸುವುದೇ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಯ ಪ್ರಮುಖ ಉದ್ದೇಶ.
ಮಸೂದೆ ಜಾರಿಗೆ ಬಂದರೆ, ಮನೆಗಳಲ್ಲಿ ಕೆಲಸ ಮಾಡುವವರು, ಸೇವಕಿಯರು, ಅಡುಗೆಯವರು, ಚಾಲಕರು, ದಾದಿಯರು ಮತ್ತು ಇತರರು ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮನೆಕೆಲಸಗಾರರನ್ನು ನೇಮಿಸಿಕೊಳ್ಳುವವರು, ಮಸೂದೆಯ ಅಧೀನದಲ್ಲಿ ಸ್ಥಾಪಿಸಲಾಗುವ ಕಲ್ಯಾಣ ನಿಧಿಗೆ ವೇತನದ ಶೇ 5 ರಷ್ಟನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಗೃಹ ಕೆಲಸದ ಕಾರ್ಮಿಕರಿಗೂ ವೇತನ ಭದ್ರತೆ, ಕೆಲಸದ ಸಮಯ ಇತ್ಯಾದಿ ಚೌಕಟ್ಟು ರೂಪಿತಗೊಳ್ಳಲಿದೆ.