ಬೆಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಆಸ್ತಿ ಹಕ್ಕು ದಾಖಲೆಗಳಾದ ನಮೂನೆ 11ಎ ಮತ್ತು 11ಬಿ (Form 11A & 11B) ಇ-ಸ್ವತ್ತು ದಾಖಲಾತಿಗಳನ್ನು ಪಡೆಯಲು ಇನ್ಮುಂದೆ ಅಲೆಯಬೇಕಾಗಿಲ್ಲ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಇ-ಸ್ವತ್ತು ತಂತ್ರಾಂಶದ ಮೂಲಕ ಅತ್ಯಂತ ಸುಲಭವಾಗಿ ದಾಖಲೆಗಳನ್ನು ಪಡೆಯಲು ರಾಜ್ಯ ಸರ್ಕಾರ ಹಲವು ನಾಗರಿಕ ಸೇವಾ ಕೇಂದ್ರಗಳ ಮೂಲಕ ಮುಖಾಮುಖಿ ಅರ್ಜಿ ಸಲ್ಲಿಕೆಗೆ ಮುಕ್ತ ಅವಕಾಶ ಕಲ್ಪಿಸಿದೆ.
ಎಲ್ಲಿ ಅರ್ಜಿ ಸಲ್ಲಿಸಬಹುದು?
ನಿಮ್ಮ ಆಸ್ತಿಯ ಹಕ್ಕು ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾರ್ವಜನಿಕರು ಕೆಳಗಿನ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ:
ಗ್ರಾಮ ಪಂಚಾಯತಿಯ ‘ಬಾಪೂಜಿ ಸೇವಾ ಕೇಂದ್ರ’
ಕರ್ನಾಟಕ ಒನ್ (Karnataka One) ಕೇಂದ್ರಗಳು
ಬೆಂಗಳೂರು ಒನ್ (Bangalore One) ಕೇಂದ್ರಗಳು
ಗ್ರಾಮ ಒನ್ (Grama One) ನಾಗರಿಕ ಸೇವಾ ಕೇಂದ್ರಗಳು
ಅರ್ಜಿ ಶುಲ್ಕದ ವಿವರಗಳು:
ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅಧಿಕೃತ ದರಗಳು ಈ ಕೆಳಗಿನಂತಿವೆ:
ಸೇವೆ ನಿಗದಿತ ಶುಲ್ಕ
ಕರ್ನಾಟಕ ಒನ್ / ಬೆಂಗಳೂರು ಒನ್ / ಗ್ರಾಮ ಒನ್ ಅರ್ಜಿ ಶುಲ್ಕ ₹45/-
ಸ್ಕ್ಯಾನಿಂಗ್ ಮತ್ತು ಪ್ರಿಂಟಿಂಗ್ ವೆಚ್ಚ (ಪ್ರತಿ ಪುಟಕ್ಕೆ) ₹5/-
ಗಮನಿಸಿ: “ನಿಮ್ಮ ಆಸ್ತಿ, ನಿಮ್ಮ ಹಕ್ಕು”. ಸಾರ್ವಜನಿಕರು ಯಾವುದೇ ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ನಿಮ್ಮ ಹತ್ತಿರದ ಅಧಿಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ನಿಗದಿತ ಶುಲ್ಕ ಪಾವತಿಸಿ ಸುಲಭವಾಗಿ ಇ-ಸ್ವತ್ತು ಪಡೆದುಕೊಳ್ಳಬಹುದು.
ಸಹಾಯವಾಣಿ ಮಾಹಿತಿ:
ಇ-ಸ್ವತ್ತು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ, ದೂರು ಅಥವಾ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಇ-ಸ್ವತ್ತು ಸಹಾಯವಾಣಿ ಸಂಖ್ಯೆ: 9483476000 ಅನ್ನು ಸಂಪರ್ಕಿಸಬಹುದಾಗಿದೆ.








