ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಿ ಆದೇಶಿಸಿತ್ತು. ಇದೀಗ ಮೀಸಲಾತಿ ಆದೇಶಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡಲಾಗುವ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸಲಾಗಿರುತ್ತದೆ. ಈ ಮುಂಬಡ್ತಿ ಮೀಸಲಾತಿಯು ಗ್ರೂಪ್-ಎ ಕನಿಷ್ಟ ದರ್ಜೆಯ ವೃಂದವೂ ಒಳಗೊಂಡಂತೆ ಆ ವೃಂದದವರೆಗಿನ ಇತರ ಎಲ್ಲಾ ವೃಂದಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.
ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ – CM ಬಸವರಾಜ ಬೊಮ್ಮಾಯಿ
ಇನ್ನೂ ಬ್ಯಾಕ್ ಲಾಗ್ ಹುದ್ದೆಗಳಿಗೆ ಎದುರಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮುಂಬಡ್ತಿ ನೀಡಲು ನಿಗದಿಪಡಿಸಲಾಗಿದ್ದ ಹೆಚ್ಚುವರಿ ರೋಸ್ಟರ್ ಬಿಂದುಗಳನ್ನು ರದ್ದುಪಡಿಸಿ, ಒಂದು ರೋಸ್ಟರ್ ವರ್ತುಲದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಗರಿಷ್ಠ 9 ಹೆಚ್ಚುವರಿ ಬಿಂದುಗಳನ್ನು ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 1 ಹೆಚ್ಚುವರಿ ಬಿಂದುಗಳನ್ನು ಪರಿಗಣಿಸಿ ಬಡ್ತಿ ನೀಡಲು ಸೂಚಿಸಲಾಗಿದೆ.
ಈ ಸರ್ಕಾರಿ ಆದೇಶಗಳಲ್ಲಿ ನೀಡಲಾಗಿರುವ ಸೂಚನೆಗಳನ್ನು ಎಲ್ಲಾ ನೇಮಕಾತಿ ಪ್ರಾಧಿಕಾರಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ, ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.