ಬೆಂಗಳೂರು: ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ಪರಭಾರೆ ಮಾಡಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ, 1978 ರನ್ವಯ ನಿರ್ಬಂಧವನ್ನು ವಿಧಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಭೂ ರಹಿತರಾಗುವುದನ್ನು ತಪ್ಪಿಸುವ ಧೈಯೋದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಕಾಲದಿಂದ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು ಮತ್ತು ಸೃಷ್ಟಿಕರಣಗಳನ್ನು ನಿವಾರಿಸಲು ಸರ್ಕಾರವು ಆಗಿಂದಾಗ್ಗೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿರುತ್ತದೆ.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಶ್ರೀ ಮುನ್ನಯ್ಯ ಹಾಗೂ ಇತರರು ರಾಜ್ಯ ಸರ್ಕಾರ ಮತ್ತು ಇತರರ ವಿರುದ್ಧ ದಾಖಲಿಸಿದ ರಿಟ್ ಅರ್ಜಿ ಸಂಖ್ಯೆ:60483/2016 (ಎಸ್ಸಿ/ಎಸ್ಟಿ) ಪುಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 05.07.2021 ರಂದು ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುಮತಿ ಪಡೆಯದೇ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಸಂಭವವಿರುವುದರಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರು ಭೂರಹಿತರಾಗುವ ಸಾಧ್ಯತೆಗಳು ಹೆಚ್ಚಾಗುವುದಲ್ಲದೇ ಪಿಟಿಸಿಎಲ್ ಕಾಯ್ದೆಯ ಮೂಲ ಉದ್ದೇಶವು ಸಫಲವಾಗುವುದಿಲ್ಲ.
ಆದುದರಿಂದ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಭೂರಹಿತರಾಗುವುದನ್ನು ತಡೆಯಲು ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ, 1978ರ ಧೈಯೋದ್ದೇಶಗಳನ್ನು ಗಂಭೀರವಾಗಿ ಪಾಲಿಸುವ ದೃಷ್ಟಿಯಿಂದ ಇನ್ನು ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಜಮೀನುಗಳನ್ನು ಭೂಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ.
ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ ಕರ್ನಾಟಕ ವಿಧಾನಸಭೆ ಇವರು ಮಾನ್ಯ ಕಂದಾಯ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಲ್ಲಿ 10 ಸೆಂಟ್ಸ್ ಜಾಗವನ್ನು ಸ್ವಂತ ವಾಸದ (Residential Purpose) ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಅಥವಾ ತಹಶೀಲ್ದಾರ್ರವರಿಗೆ ಭೂ ಪರಿವರ್ತನೆ ಮಾಡಲು ಸರ್ಕಾರದ ಪೂರ್ವಾನುಮತಿ ಇಲ್ಲದೇ ಸಕ್ಷಮ ಪ್ರಾಧಿಕಾರವೆಂದು ಆದೇಶ ಹೊರಡಿಸಿದ್ದಲ್ಲಿ ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಈ ಸುತ್ತೋಲೆಯಲ್ಲಿನ ಅಂಶವನ್ನು ಸರಳೀಕರಿಸಿ ವಾಸ್ತವ್ಯ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ 10 ಸೆಂಟ್ಸ್ ಜಮೀನಿನ ಭೂ ಪರಿವರ್ತನೆಯ ಅಧಿಕಾರವನ್ನು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ರವರಿಗೆ ನೀಡುವಲ್ಲಿ ಸೂಕ್ತ ಕ್ರಮವಹಿಸುವಂತೆ ಕೋರಿರುತ್ತಾರೆ. ಆದುದರಿಂದ, ಇನ್ನು ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ / 4 ಗುಂಟೆ ಜಮೀನಿನಲ್ಲಿ ಸ್ವಂತ ವಾಸದ (Residential Purpose) ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಕೋರಿ ಮಂಜೂರಿದಾರರು ಅಥವಾ ವಾರಸುದಾರರು ಅರ್ಜಿಯನ್ನು ಸಲ್ಲಿಸಿದಲ್ಲಿ, ಅಂತಹ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ,
ಜಿಲ್ಲಾಧಿಕಾರಿಯರ ಹಂತದಲ್ಲಿಯೇ ನಿಯಮಾನುಸಾರ ಭೂ ಪರಿವರ್ತನೆ ಆದೇಶ ಹೊರಡಿಸಲು ಕುಮವಹಿಸತಕ್ಕದ್ದು, ಹಾಗೂ ಸ್ವಂತ ವಾಸದ ಭೂ ಪರಿವರ್ತನ ಮಾಡಿದ ಆದೇಶದಲ್ಲಿ ಭೂ ಪರಿವರ್ತನೆಯಾದ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡತಕ್ಕದ್ದಲ್ಲ ಎಂಬ ಷರತ್ತನ್ನು ವಿಧಿಸಲು ಸಹ ಸೂಚಿಸಿದೆ. ಆದರೆ ಸದರಿ ಜಮೀನನ್ನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು, ಇದರಲ್ಲಿ ಲೋಪವೇನಾದರೂ ಕಂಡುಬಂದಲ್ಲಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದೆ.