ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತ ತೃತೀಯ ಲಿಂಗಿ ಫಲಾನುಭವಿಗಳಿಗೆ ದೇವರಾಜ ಅರಸು ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಆಸಕ್ತ ಅರ್ಹ ತೃತೀಯ ಲಿಂಗಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆ.08 ಕೊನೆಯ ದಿನವಾಗಿರುತ್ತದೆ.
ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ನಿವೇಶನದ ಖಾತೆಯ ನಕಲು ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಫೋಟೋ ಒದಗಿಸಬೇಕು.
ತೃತೀಯ ಲಿಂಗಿ ಅರ್ಜಿದಾರರು ಮಾತ್ರ ಅರ್ಹರಾಗಿದ್ದು, ಅವರ ಕುಟುಂಬವು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ, ಬಡತನ ರೇಖೆಗಿಂತ ಕಡಿಮೆ ಇರಬೇಕು. ಅರ್ಜಿದಾರರು ವಸತಿ ರಹಿತ, ಶೂನ್ಯ ಕೋಣೆ, ಒಂದು ಕೋಣೆ, ಎರಡು ಕೋಣೆಯೊಂದಿಗೆ ಕಚ್ಚಾ ಗೋಡೆ ಹಾಗೂ ಕಚ್ಚಾ ಛಾವಣಿ ಹೊಂದಿದವರು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಯಾವುದೇ ಭಾಗದಲ್ಲಿ ಸ್ವಂತ ಮನೆ ಹೊಂದಿರಬಾರದು. ಬದಲಾಗಿ ಶಿಥಿಲಗೊಂಡ ಮನೆ, ಗುಡಿಸಲು, ಖಾಲಿ ನಿವೇಶನದಲ್ಲಿ ವಾಸಿಸುತ್ತಿರುವವರು ಅರ್ಹರಾಗಿರುತ್ತಾರೆ.
ಅರ್ಜಿದಾರರು ಸ್ವಂತ ನಿವೇಶನ ಹೊಂದಿದಲ್ಲಿ, ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು. ಬೇರೆ ಯಾವುದೇ ಯೋಜನೆಗಳಡಿ ಹಾಗೂ ಇಲಾಖೆ ವತಿಯಿಂದ ಸೌಲಭ್ಯ ಪಡೆದಿರಬಾರದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಕಂಪ್ಲಿ ಪುರಸಭೆ ಕಾರ್ಯಾಲಯದ ಆಶ್ರಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.