ಬೆಳಗಾವಿ : ರಾಜ್ಯದ ಯಜಮಾನಿ ಮಹಿಳೆಯರಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡಲಾಗುವುದು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭರವಸೆ ನೀಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಎಂದು ಸಚಿವರು ಹೇಳಿದರು.
ಮುಂದಿನ ತಿಂಗಳು 20 ನೇ ತಾರೀಖಿಗೆ ನಮ್ಮ ಸರ್ಕಾರ ಅಧಿಕಾರ ಬಂದು 2 ವರ್ಷ ಪೂರೈಸುತ್ತಿದೆ. ಈವರೆಗೆ 80 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಜೇಬಿಗೆ ಹಾಕಿದ್ದೇವೆ. ಇದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ ಸಾಮಾನ್ಯರ ಮೇಲಿರುವ ಬದ್ಧತೆ ಎಂದು ಸಚಿವರು ಹೇಳಿದರು.
2023 ರಲ್ಲಿ ಜನರ ವಿಶ್ವಾಸ ಗಳಿಸಿ ಕರ್ನಾಟದಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿದ್ದೇವೆ. ಸರ್ಕಾರ ಬಂದು 100 ದಿನಗಳ ಒಳಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಮನೆ ಬಾಗಿಲಿಗೆ ತಂದಿದ್ದೇವೆ. 136 ಸ್ಥಾನ ಗೆದ್ದರೂ ರಾಜ್ಯ ಸರ್ಕಾರ ಉಳಿಯುವುದಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬರಲು ಸಾಧ್ಯವಿಲ್ಲ ಅಂತ ಬಿಜೆಪಿಗರು ಹೇಳುತ್ತಿದ್ದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕರ್ನಾಟಕದ ಇತಿಹಾಸದಲ್ಲೇ ಎಂದೂ ಕಾಣದಂತಹ ಹಲವಾರು ಯೋಜನೆಗಳ ಮೂಲಕ, ಅಭಿವೃದ್ಧಿಯ ಮೂಲಕ ನಮ್ಮ ಸರಕಾರ ಇಂದು ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 4-5 ಸಾವಿರ ರೂಪಾಯಿ ಲಾಭ ಮಾಡಿಕೊಡಲಾಗುತ್ತಿದೆ. ತನ್ಮೂಲಕ ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 63.77 ರೂಪಾಯಿ ಇತ್ತು, ಇಂದು 102 ರೂಪಾಯಿ ಆಗಿದೆ. ಗ್ಯಾಸ್ ಸಿಲೆಂಡರ್ ದರ 410 ರೂಪಾಯಿ ಇತ್ತು, ಈಗ 855.50 ರೂಪಾಯಿ ಆಗಿದೆ. ಅಲ್ಲದೆ, ಸಿಮೆಂಟ್, ರಸ ಗೊಬ್ಬರದ ಬೆಲೆ ದುಬಾರಿಯಾದೆ. ಇದು ಕೇಂದ್ರ ಸರ್ಕಾರದ ಜನರಿಗೆ ಕೊಟ್ಟಿರುವ ಉಡುಗೊರೆ ಎಂದು ಕಿಡಿಕಾರಿದರು.