ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State Road Transport Corporation -KSRTC) ಸಮಸ್ತ ಸಿಬ್ಬಂದಿಗಳಿಗೆ ಅಕ್ಟೋಬರ್ 2022ರಿಂದ ಪ್ರತಿ ತಿಂಗಳು 1ನೇ ತಾರೀಕಿನಂದು ವೇತನ ಪಾವತಿ ಮಾಡುವ ಉಪ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಹೀಗಾಗಿ ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಇನ್ಮುಂದೆ ಪ್ರತಿ ತಿಂಗಳ 1ನೇ ತಾರೀಕಿನಂದೇ ವೇತನ ಪಾವತಿಯಾಗಲಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕಾರದಂತ ವಿ ಅನ್ಬುಕುಮಾರ್ ( KSRTC MD V.Anbhukumar ) ಅವರು ಆದೇಶ ಹೊರಡಿಸಿದ್ದು, ಸಾರಿಗೆ ಸಂಸ್ಥೆಯ ಆತ್ಮವೇ ನಮ್ಮ ಕಾರ್ಮಿಕ ಬಂಧುಗಳು. ಅವರ ಕ್ಷೇಮಾಭಿವೃದ್ಧಿ, ಹಿತಾಸಕ್ತಿಯನ್ನು ಕಾಪಾಡುವ ಹಾಗೂ ಅವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯೆತೆಯಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 2022ರ ತಿಂಗಳಿನಿಂದ ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಸಮಸ್ತ ಸಿಬ್ಬಂದಿಗಳಿಗೆ ಪ್ರತಿ ತಿಂಗಳ ದಿನಾಂಕ 1ರಂದೇ ವೇತನವನ್ನು ಪಾವತಿ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಇನ್ನೂ ಈ ಕ್ರಮಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ತಯಾರಿಸುವಾಗ ಹಾಜರಾತಿ, ರಜೆ ಮಂಜೂರಾತಿ ಆದೇಶ, ಹೆಚ್ಚುವರಿ ಭತ್ಯೆ ಮುಂತಾದ ದಾಖಲಾತಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ವೇತನದ ಬಿಲ್ಲನ್ನು ಸಿದ್ದಪಡಿಸುವಂತೆ ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾಗಿದ್ದಾಗ್ಯೂ ಸಹ, ನಿಗಮದ ಸಮಸ್ತ ಕಾರ್ಮಿಕ ಸಿಬ್ಬಂದಿಗಳ ಹಿತದೃಷ್ಠಿಯಿಂದ ಈ ನೂತನ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಾರಂಭಿಕ ತಿಂಗಳುಗಳಲ್ಲಿ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿದ್ದಾರೆ.
ಇನ್ನೂ ಈ ಯೋಜನೆಯನ್ನು ವಿಭಾಗಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಸಿಬ್ಬಂದಿಗಳು ಪ್ರತಿ ತಿಂಗಳ ದಿನಾಂಕ 1ರಂದೇ ವೇತನವನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದರೇ, ಸಂಬಂಧಪಟ್ಟ ಉಸ್ತುವಾರಿ ಅಧಿಕಾರಿಗಳೇ ಜವಾಬ್ದಾರಿಯಾಗಿರುತ್ತಾರೆ ಎಂಬುದಾಗಿ ಎಚ್ಚರಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ