ಬೆಂಗಳೂರು: 2021-22ನೇ ಸಾಲಿನಲ್ಲಿ ನೇಮಕಗೊಂಡು, ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ( Guest Lecturer ) ನವೆಂಬರ್ 2022ರ ತಿಂಗಳಿನ 23 ದಿನಗಳಿಗೆ ಮತ್ತು ಹಿಂದಿನ ಸಾಲಿನಲ್ಲಿ ಕೊರತೆಯಾಗಿರುವ ತಿಂಗಳಿಗೆ ಗೌರವಧಕ್ಕಾಗಿ ಅನುದಾನವನ್ನು ರಾಜ್ಯ ಸರ್ಕಾರ ( Karnataka Government ) ಬಿಡುಗಡೆ ಮಾಡಿದೆ.
ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ( Department of Collegiate Education ) ನಡವಳಿಯನ್ನು ಹೊರಡಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ( Government First Grade College ) 2021-22ನೇ ಸಾಲಿಗೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಗೌರವಧನ ಪಾವತಿಸುವ ಸಲುವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗಿದೆ. ಇದಕ್ಕಾಗಿ 18,43,68,406 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದಿದೆ.
ಆಯಾ ಕಾಲೇಜು ವ್ಯಾಪ್ತಿಯ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿಸುವುದು. ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಂದ ಅನುಮೋದನೆಗೊಂಡಿಲ್ಲದ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಿದ್ದಲ್ಲಿ, ಸಂಬಂಧಪಟ್ಟ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.