ಬೆಂಗಳೂರು: ಬಗರ್ ಹುಕುಂ ( Bhagar Hukum ) ಸಮಿತಿ ಮಂಜೂರು ಮಾಡಿದ ಸಾಗುವಳಿದಾರರಿಗೆ ಮಂಜೂರಾತಿ ಪತ್ರವನ್ನು ತಿಂಗಳೊಳಗೆ ನೀಡುವಂತೆ ಹಾಗೂ ಸಾಗುವಳಿ ಪತ್ರ ನೀಡಿದ ಮಾಹಿತಿಯನ್ನು ವಾರದೊಳಗೆ ಇಲಾಖೆಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ( Minister Kota Srnivas Poojary ) ಆನೇಕಲ್ ತಾಲೂಕು ತಹಸೀಲ್ದಾರ್ ಅವರಿಗೆ ಸೂಚಿಸಿದರು.
BIGG NEWS: ಮಳವಳ್ಳಿ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್
ವಿಧಾನಸೌಧದಲ್ಲಿ ಬುಧವಾರ ಬೆಂಗಳೂರು ನಗರ ಜಿಲ್ಲೆ ಕಂದಾಯ ಇಲಾಖೆ ( Revenue Department ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನೇಕಲ್ ತಾಲೂಕು ಬಗರ್ ಹುಕ್ಕುಂ ಸಮಿತಿ ಈಗಾಗಲೆ ಅರ್ಹರಿಗೆ ಭೂಮಿ ಮಂಜೂರಾತಿ ನೀಡಿದೆ. ಸ್ವಾಧೀನದಲ್ಲಿರುವ ವರಲ್ಲಿ ಶೋಷಿತ ಸಮುದಾಯದವರೇ ಹೆಚ್ಚು ಸಾಗುವಳಿದಾರರಾಗಿದ್ದಾರೆ. ಆದರೂ ತಹಸೀಲ್ದಾರ್ ಸಾಗುವಳಿ ಪತ್ರ ( Cultivation Letter ) ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈಗಾಗಲೆ ಸ್ಥಳ ಪರಿಶೀಲನೆ ನಡೆಸಿರುವ ಪ್ರಕರಣಗಳಲ್ಲಿ ಎಲ್ಲರಿಗೂ ಸಾಗುವಳಿ ಪತ್ರ ನೀಡಬೇಕು. ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ ವಾರದೊಳಗೆ ಎಷ್ಟು ಪ್ರಕರಣಗಳು ಇತ್ಯರ್ಥವಾಗಿವೆ ಎಂದು ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ಆನೇಕಲ್ ತಾಲೂಕಿನಲ್ಲಿ ಒಟ್ಟು 694 ಅರ್ಜಿಗಳಲ್ಲಿ ಈವರೆಗೆ ಕೇವಲ 24 ಸಾಗುವಳಿ ಪತ್ರಗಳನ್ನು ಮಾತ್ರ ನೀಡಲಾಗಿದೆ. ಸಮಿತಿ ಮಂಜೂರು ಮಾಡಿರುವ ಎಲ್ಲ ಅರ್ಜಿಗಳ ಸಂಬಂಧ ಈಗಾಗಲೆ ಸ್ಥಳ ಪರಿಶೀಲನೆ ಹಾಗೂ ಸಂಬಂಧಿಸಿದ ಶುಲ್ಕ ಪಾವತಿಸಲಾಗಿದೆ. ತಹಸೀಲ್ದಾರ್ ಅವರು ಕೂಡಲೆ ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಈ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ಮೇಲ್ಚಿಚಾರಣೆಗೆ ಇಲಾಖೆಯಿಂದ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ. ಇ. ವೆಂಕಟಯ್ಯ, ಇಲಾಖೆ ಆಯುಕ್ತ ಡಾ.ಕೆ.ರಾಕೇಶಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಬಿ. ಉದಯಕುಮಾರ್ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಶಿವಪ್ಪ ಲಮಾಣಿ ಸಭೆಯಲ್ಲಿ ಉಪಸ್ಥಿತರಿದ್ದರು.