ಟೈಪ್-1 ಡಯಾಬಿಟಿಸ್‌ನಿಂದ (Type-1 Diabetes) ಬಳಲುತ್ತಿರುವ ಲಕ್ಷಾಂತರ ರೋಗಿಗಳ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ವೈದ್ಯಕೀಯ ರಂಗದಲ್ಲಿ ಒಂದು ದೊಡ್ಡ ಹೆಜ್ಜೆ ಇಡಲಾಗಿದೆ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ‘ಬಯೋ ಇಂಜಿನಿಯರ್ಡ್ ಮಿನಿ-ಪ್ಯಾಂಕ್ರಿಯಾಸ್’ (Bio-engineered Mini-Pancreas) ಈಗ ನೈಜ ಅಂಗದಂತೆಯೇ ಕೆಲಸ ಮಾಡುತ್ತಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರಂತರವಾಗಿ ಗಮನಿಸುತ್ತಾ, ದೇಹಕ್ಕೆ ಅಗತ್ಯವಿರುವಾಗ ಸೂಕ್ತ ಪ್ರಮಾಣದ ಇನ್ಸುಲಿನ್ ಅನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡುತ್ತದೆ.
ಇದು ಲ್ಯಾಬ್‌ನಲ್ಲಿ ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಕೃತಕ ರಚನೆಯಾಗಿದ್ದರೂ, ದೇಹದಲ್ಲಿನ ಪ್ಯಾಂಕ್ರಿಯಾಟಿಕ್ ಬೀಟಾ ಕೋಶಗಳ (Beta Cells) ಕಾರ್ಯವನ್ನೇ ಸಂಪೂರ್ಣವಾಗಿ ನಕಲು ಮಾಡುತ್ತದೆ. ಪ್ರಸ್ತುತ ಟೈಪ್-1 ಮಧುಮೇಹ ಹೊಂದಿರುವ ರೋಗಿಗಳು ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್‌ಗಳ ಮೇಲೆ ಅವಲಂಬಿತರಾಗಬೇಕಿದೆ. ಆದರೆ, ಭವಿಷ್ಯದಲ್ಲಿ ಈ ಮಿನಿ-ಪ್ಯಾಂಕ್ರಿಯಾಸ್ ಅನ್ನು ರೋಗಿಯ ದೇಹದಲ್ಲಿ ಅಳವಡಿಸುವುದರಿಂದ, ಇಂಜೆಕ್ಷನ್‌ಗಳ ಅಗತ್ಯತೆ ಗಣನೀಯವಾಗಿ ಕಡಿಮೆಯಾಗಲಿದೆ ಅಥವಾ ಸಂಪೂರ್ಣವಾಗಿ ಮುಕ್ತಿ ಸಿಗಲಿದೆ ಎಂದು ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ರಂಗದಲ್ಲಿ ಹೊಸ ಮೈಲಿಗಲ್ಲು..!
ಲ್ಯಾಬ್‌ನಲ್ಲಿ ಬೆಳೆಸಿದ ಐಲೆಟ್ ಕೋಶಗಳ (Islet cells) ಮೂಲಕ ಈಗಾಗಲೇ ನಡೆಸಲಾದ ಪ್ರಾಯೋಗಿಕ ಚಿಕಿತ್ಸೆಗಳು ಅತ್ಯಂತ ಆಶಾದಾಯಕ ಫಲಿತಾಂಶಗಳನ್ನು ನೀಡಿವೆ. ಈ ಬಯೋ ಇಂಜಿನಿಯರ್ಡ್ ಮಿನಿ-ಪ್ಯಾಂಕ್ರಿಯಾಸ್ ಆವಿಷ್ಕಾರವು ‘ರೀಜೆನೆರೇಟಿವ್ ಮೆಡಿಸಿನ್’ (Regenerative Medicine) ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಲಿದೆ.
ದೇಹದಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಈ ಜೈವಿಕ ಮಿನಿ-ಅಂಗವು, ಮಧುಮೇಹದ ನಿರ್ವಹಣೆಯನ್ನು ಅತ್ಯಂತ ಸುಲಭಗೊಳಿಸುತ್ತದೆ. ಇದರಿಂದ ರೋಗಿಗಳು ಯಾವುದೇ ಆತಂಕವಿಲ್ಲದೆ ತಮ್ಮ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಧುಮೇಹ ನಿಯಂತ್ರಣದಲ್ಲಿ ಇಂಜೆಕ್ಷನ್ ನೋವಿನಿಂದ ಮುಕ್ತಿ ಸಿಗುವುದು ರೋಗಿಗಳಿಗೆ ಸಿಗುವ ಬಹುದೊಡ್ಡ ವರ ಎಂದೇ ಹೇಳಬಹುದು. ಈ ಸಂಶೋಧನೆಗಳು ಅಂತಿಮ ಹಂತವನ್ನು ತಲುಪಿ, ಸಾರ್ವಜನಿಕರಿಗೆ ಲಭ್ಯವಾದರೆ, ಮಧುಮೇಹಿಗಳ ಜೀವನ ಮಟ್ಟ ಸಂಪೂರ್ಣವಾಗಿ ಸುಧಾರಿಸಲಿದೆ. ವಿಜ್ಞಾನಿಗಳ ಈ ಶ್ರಮ ಯಶಸ್ವಿಯಾದರೆ, ಡಯಾಬಿಟಿಸ್ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಉಳಿಯದೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿನ ಈ ಅದ್ಭುತ ಆವಿಷ್ಕಾರಗಳು ಭವಿಷ್ಯದಲ್ಲಿ ಮಾನವಕುಲಕ್ಕೆ ಉತ್ತಮ ಆರೋಗ್ಯದ ಭರವಸೆಯನ್ನು ನೀಡುವುದು ಖಚಿತ.








