ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷದೊಳಗೆ ತಮ್ಮ ಹುದ್ದೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು “ಆರ್ಥಿಕ ಸುನಾಮಿ” ಬರಲಿದೆ ಎಂದು ಎಚ್ಚರಿಸಿದ್ದು, ಸಾರ್ವಜನಿಕ ಒತ್ತಡದಿಂದಾಗಿ ವ್ಯವಸ್ಥೆಯೇ ದಂಗೆ ಏಳುತ್ತಿದೆ ಎಂದು ಹೇಳಿದ್ದಾರೆ.ಒಂದು ಕಾಲದಲ್ಲಿ ಪ್ರಧಾನಿ ಮೋದಿಯವರ “ನಿಯಂತ್ರಣ”ದಲ್ಲಿದ್ದ ವ್ಯವಸ್ಥೆಯು ಇದೀಗ ಕುಸಿಯುತ್ತಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಈಗ ಈ ವ್ಯವಸ್ಥೆಯೇ ಪ್ರಧಾನಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ಬಗ್ಗೆ ತನಗೆ ಮಾಹಿತಿ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯ ಇಂದಿರಾ ಭವನದಲ್ಲಿ ಆದಿವಾಸಿ ಕಾಂಗ್ರೆಸ್ ಆಯೋಜಿಸಿದ್ದ ದೇಶಾದ್ಯಂತದ ಬುಡಕಟ್ಟು ನಾಯಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಿಟಿಐ ವರದಿಯ ಪ್ರಕಾರ, “ನನ್ನ ಅಂದಾಜಿನ ಪ್ರಕಾರ, ಮೋದಿಜಿ ಒಂದು ವರ್ಷದೊಳಗೆ ಪ್ರಧಾನಿಯಾಗಿರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
”ಒಂದು ಕಡೆಯಿಂದ ಭಾರಿ ಆರ್ಥಿಕ ಸುನಾಮಿ ಬರುತ್ತಿದೆ, ಬೆಲೆಗಳು ಏರುತ್ತಿವೆ ಮತ್ತು ಇದು ಕೇವಲ ಆರಂಭವಷ್ಟೇ. ಭಾರತವು ನೀವು ಎಂದಿಗೂ ನೋಡಿರದಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ. ಇದು ನಡೆಯುತ್ತಿದೆ ಮತ್ತು ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ.”
”ಮತ್ತೊಂದೆಡೆ, ಭಾರತದ ವ್ಯವಸ್ಥೆಯೊಳಗೆ ಸಾಂಸ್ಥಿಕ ದಂಗೆ ನಡೆಯುತ್ತಿದೆ… ಚುನಾವಣಾ ಆಯೋಗವು ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ…” ಎಂದು ಗಾಂಧಿ ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು, ಗುಪ್ತಚರ ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ನ್ಯಾಯಾಂಗದ ಸದಸ್ಯರು ತಮಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಗಾಂಧಿ ಹೇಳಿಕೊಂಡಿದ್ದಾರೆ. “ಎಲ್ಲರೂ ದಂಗೆ ಏಳುತ್ತಿದ್ದಾರೆ ಮತ್ತು ಮಾಹಿತಿ ನಮ್ಮ ಬಳಿ ಬರುತ್ತಿದೆ.”
”ಆದ್ದರಿಂದ ನಿಯಂತ್ರಣದ ವ್ಯವಸ್ಥೆಯು ಆಂತರಿಕವಾಗಿ ಕುಸಿಯುತ್ತಿದೆ. ಸಾರ್ವಜನಿಕರ ಒತ್ತಡವು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ಅವರು ಇದೇ ಹಾದಿಯಲ್ಲಿ ಮುಂದುವರಿದರೆ, ಅದು ಅವರಿಗೆ ಅಪಾಯಕಾರಿಯಾಗಲಿದೆ.”
”ಚುನಾವಣಾ ವ್ಯವಸ್ಥೆಯು ಅಕ್ರಮವಾಗಿದೆ ಎಂದು ಜನರಿಗೆ ತಿಳಿದರೆ ಮತ್ತು ಅವರ ಮೇಲಿರುವ ಆರ್ಥಿಕ ಒತ್ತಡದಿಂದ ಸಾರ್ವಜನಿಕರ ಆಕ್ರೋಶ ಹೊರಬಂದರೆ, ನಾಳೆ ಏನಾಗುತ್ತದೆ ಎಂದು ಚುನಾವಣಾ ಆಯೋಗವೂ ಚಿಂತಿತವಾಗಿದೆ,” ಎಂದು ಅವರು ಹೇಳಿದ್ದಾರೆ.
”ಏನಾಗಬಹುದು ಎಂದರೆ, ಅವರು ಸಾರ್ವಜನಿಕ ಒತ್ತಡವನ್ನು ಹತ್ತಿಕ್ಕಲು ಪ್ರಯತ್ನಿಸಬಹುದು ಮತ್ತು ತುರ್ತು ಪರಿಸ್ಥಿತಿಯಂತಹದನ್ನು ಹೇರಬಹುದು. ಅದು ಸಾಧ್ಯವಿದೆ.”.
”ನಾವು ಈಗ ಎರಡನೇ ಹಂತವನ್ನು ಪ್ರವೇಶಿಸುತ್ತಿದ್ದೇವೆ, ಏಕೆಂದರೆ ಅವರು ಹಿಂದೆ ಸಂಪೂರ್ಣ ನಿಯಂತ್ರಣದಲ್ಲಿದ್ದರು ಆದರೆ ಈಗ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದರು.
ಪ್ರಧಾನಿ ಮೋದಿಯವರಿಗೆ ಇದು ನಡೆಯುತ್ತಿದೆ ಎಂದು ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ಸೇರಿಸಿದ್ದಾರೆ. “ನಾನು ಮೋದಿಜಿಯನ್ನು ಭೇಟಿಯಾದಾಗ ಮತ್ತು ಅವರ ಸಭೆಗಳಲ್ಲಿ ಭಾಗವಹಿಸಿದಾಗ, ಮೋದಿಜಿಯ ಬಗ್ಗೆ ನನ್ನ ಬಳಿ ಅಷ್ಟು ಮಾಹಿತಿಯಿದೆ, ನಾನು ಏನು ತಿಳಿದುಕೊಂಡಿದ್ದೇನೆ ಎಂಬುದು ಅವರಿಗೂ ಗೊತ್ತು. ನಾನು ಅವರನ್ನು ಭೇಟಿಯಾದಾಗ… ಅವರು ಹಿಂದೆ ನಿಯಂತ್ರಣದಲ್ಲಿದ್ದ ವ್ಯವಸ್ಥೆಯು ಈಗ ಅಲುಗಾಡುತ್ತಿದೆ ಮತ್ತು ಎಲ್ಲಾ ಮಾಹಿತಿಯನ್ನು ನನಗೆ ನೀಡುತ್ತಿದೆ ಎಂಬುದು ಅವರಿಗೆ ತಿಳಿದಿದೆ. ಈ ಡೈನಾಮಿಕ್ಸ್ ಈಗ ನಡೆಯುತ್ತಿದೆ,” ಎಂದು ರಾಹುಲ್ ಗಾಂಧಿ ಹೇಳಿದರು.








