ಉತ್ತರಕನ್ನಡ : ಕರಾವಳಿ ಭಾಗದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮ ನೀತಿಯನ್ನು ರೂಪಿಸಿ ಈ ಒಂದು ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಸೂಕ್ತವಾದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮುರುಡೇಶ್ವರದ ಆರ್.ಎನ್.ಎಸ್ ಗಾಲ್ಫ್ ಕ್ಲಬ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕರಾವಳಿಯಲ್ಲಿ ಒಂದು ಪೈವ್ ಸ್ಟಾರ್ ಹೊಟೇಲ್ಗಳಿಲ್ಲ. ಆದರೆ ಇದೀಗ ನಮಗೆ ಅವಕಾಶ ಸಿಕ್ಕಿದ್ದು, ನಾವು ಕರಾವಳಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ಈ ಭಾಗದಲ್ಲಿ ಬದುಕಿಗಾಗಿ ಹಲವರು ಹೊರಗಡೆ ಹೋಗುತ್ತಿದ್ದಾರೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜಿಸಲು ಮೂರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದು, ಸದ್ಯದಲ್ಲಿಯೇ ಹೊಸ ನೀತಿ ಬರಲಿದೆ.ಬೆಲೆ ಏರಿಕೆಯಿಂದ ತತ್ತರಿಸಿದ ಕಾರಣ ಗ್ಯಾರಂಟಿ ನೀಡಿದ್ದೆವು. ಆದರೆ ಬಿಜೆಪಿಯವರಿಗೂ ಕೂಡ ಬೆಲೆ ಏರಿಕೆ ಅರ್ಥ ಆಗಿಲ್ಲ. ಇದೀಗ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಗ್ಯಾರಂಟಿ ಹಣ ಘೋಷಣೆ ಮಾಡಿದೆ ಎಂದರು.
ಮೀನುಗಾರರ ಬದುಕನ್ನು ಹಸನಾಗಿಸಲು ಸರ್ಕಾರ ಬದ್ಧವಾಗಿದೆ. ಮೀನುಗಾರರು ಮೃತಪಟ್ಟರೆ ಇದೀಗ 8 ಲಕ್ಷ ನೀಡಲಾಗುತಿತ್ತು. ಆದರೆ ಇನ್ನು ಮುಂದೆ 10 ಲಕ್ಷ ನೀಡುವುದಾಗಿ ಘೋಷಿಸಿದರು. ಮೀನುಗಾರರು ಶೇ.99 ಆರ್ಥಿಕವಾಗಿ ಹಿಂದುಳಿದಿದ್ದಾರೆ. ಉದ್ಯೋಗ ಸೃಷ್ಟಿಗೆ ಬಂದರುಗಳ ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ 49 ಕೋಟಿ ವೆಚ್ಚದಲ್ಲಿ ಮಂಗಳೂರಲ್ಲಿ ಬಂದರು ನಿರ್ಮಿಸಲಾಗಿದೆ ಎಂದು ತಿಳಿಸಿದರು.