ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಷ್ಟೇ ಕಠಿಣವಾದ ನಿಮ್ಮ ಕ್ರಮ ಕೈಗೊಂಡರು ಸಹ ಕೈದಿಗಳಿಗೆ ಗಾಂಜಾ ಸಪ್ಲೈ ಆಗುವುದು ನಿಲ್ಲುತ್ತಿಲ್ಲ. ಇದೀಗ ಜೈಲಿನ ವಾರ್ಡನ್ ಒಬ್ಬ ಒಳ ಉಡುಪಿನಲ್ಲಿ ಗಾಂಜಾ ತಂದು ಕೈದಿಗಳಿಗೆ ಸಪ್ಲೈ ಮಾಡುತಿದ್ದು ಇದೀಗಜೈಲಾಧಿಕಾರಿಗಳು ಆತನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ. ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳಉಡುಪಿನಲ್ಲಿ ಹಣ ಮತ್ತು ಕಪ್ಪು ಟೇಪ್‌ನಿಂದ ಸುತ್ತಿದ ಒಂದು ಪೊಟ್ಟಣ ಪತ್ತೆಯಾಯಿತು.
ಅದನ್ನು ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಪ್ರಕಾಶ್ ಗಾವಡೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಗಾಂಜಾ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಅವನನ್ನು ವಶಕ್ಕೆ ಪಡೆದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.








