ಗದಗ : ಕೋರ್ಟ್ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜೆಡಿಎಸ್ ಅಭ್ಯರ್ಥಿ ಸೇರಿದಂತೆ ಒಟ್ಟು ಆರು ಜನರನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ಹೌದು ತಿಪ್ಪೇಸ್ವಾಮಿ ಎಂಬಾತ ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವ್ಯಕ್ತಿ ಈ ವಂಚನೆಯಲ್ಲಿ ಭಾಗಿಯಾಗಿರೋದು ಬಯಲಾಗಿದೆ. ಅಲ್ಲದೆ ಗದಗ್ ಜಿಲ್ಲೆಯ ಸುಮಾರು 35ಕ್ಕೂ ಹೆಚ್ಚು ಯುವಕರಿಂದ ಲಕ್ಷ ಲಕ್ಷ ಹಣ ಪಡೆದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಒಂದು ಪ್ರಕರಣದಲ್ಲಿ ತಿಪ್ಪೇಸ್ವಾಮಿ ಅಲ್ಲದೆ ಇನ್ನೂ 9 ಜನರು ಭಾಗಿ ಆಗಿದ್ದು, ಇದೀಗ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಈ ಖದೀಮರು ಬಡವರನ್ನು ವಂಚಿಸಿ ಅವರ ಹಣದಲ್ಲಿ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಮಸ್ತ್ ಮಜಾ ಮಾಡ್ತಾಯಿದ್ದರು. ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇನ್ನೂ ಅರೆಸ್ಟ್ ಆಗಿರುವ ತಿಪ್ಪೇಸ್ವಾಮಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ. ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ ಜನರಿಂದ ಮೋಸ ಮಾಡಿ ಪಡೆದ ಹಣವನ್ನು ಚುನಾವಣೆಯಲ್ಲಿ ಬಳಕೆ ಮಾಡಿದ್ದಾನಂತೆ. ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಹಿರೇಮಠ ದಂಪತಿಗಳು ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದೆ.