ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದ್ದಾರೆ. ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿದು, ಯಾರಿಗೂ ತಿಳಿಯದಂತೆ ಭೂಮಿಯ ಅಡಿಯಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ ಎರಡು ಅಡಿಗೂ ಹೆಚ್ಚು ಆಳದಲ್ಲಿದ್ದ ಬೀಟೆ ಮರದ ತುಂಡುಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಆ ಮೂಲಕ ಅಕ್ರಮ ಮರ ಕಡಿತಲೆ ದಂದೆಗೆ ಅರಣ್ಯ ಇಲಾಖೆ ತೀವ್ರ ಬಿಸಿ ಮುಟ್ಟಿಸಿದೆ.
ರಹಸ್ಯ ಮಾಹಿತಿ ಆಧರಿಸಿ ದಾಳಿ
ಹೊಸನಗರ ತಾಲ್ಲೂಕಿನ ನಂದ್ರಿ ಗ್ರಾಮದ ನಿವಾಸಿ ಗಣೇಶ್ ಶೆಟ್ಟಿ ಬಿನ್ ಬಾಬು ಶೆಟ್ಟಿ ಎಂಬುವರು ತಮ್ಮ ಜಮೀನಿನಲ್ಲಿ ಬೀಟೆ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿದ್ದರು. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆಯ ಕಣ್ಣಿಗೆ ಮಣ್ಣೆರಚಲು ಆ ಮರದ ತುಂಡುಗಳನ್ನು ನೆಲದ ಅಡಿಯಲ್ಲಿ ಹೂತಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ (RFO) ಅನೀಲ್ ಅವರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನ್ ಕುಮಾರ್ ಹಾಗೂ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಫಯಾಜುದ್ದೀನ್ ಅವರ ಗಮನಕ್ಕೆ ತಂದು ದಾಳಿಗೆ ಯೋಜನೆ ರೂಪಿಸಿದ್ದರು.
ಜೆಸಿಬಿ ಬಳಸಿ ಅಗೆದಾಗ ಸಿಕ್ಕಿತು ಕೋಟ್ಯಂತರ ಮೌಲ್ಯದ ನಾಟಾ!
ಕಳೆದ ಸೋಮವಾರ ರಾತ್ರಿಯಂದು ಎಸಿಎಫ್ ಹಾಗೂ ಡಿಸಿಎಫ್ ಮಾರ್ಗದರ್ಶನದಲ್ಲಿ ಆರ್ ಎಫ್ ಓ ಅನೀಲ್ ಅವರು ತಮ್ಮ ಸಿಬ್ಬಂದಿ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದರು. ಆರೋಪಿ ಗಣೇಶ್ ಶೆಟ್ಟಿ ಅವರ ಜಮೀನಿಗೆ ತೆರಳಿದ ಅಧಿಕಾರಿಗಳು, ಅನುಮಾನಾಸ್ಪದ ಜಾಗದಲ್ಲಿ ಜೆಸಿಬಿ ಯಂತ್ರವನ್ನು ಬಳಸಿ ಭೂಮಿಯನ್ನು ಅಗೆದಿದ್ದಾರೆ. ಈ ವೇಳೆ ಎರಡು ಮೂರು ಅಡಿ ಆಳದಲ್ಲಿ ಹೂತು ಹಾಕಲಾಗಿದ್ದ ಬರೋಬ್ಬರಿ 14 ಬೀಟೆ ಮರದ ತುಂಡುಗಳು ಪತ್ತೆಯಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಎಲ್ಲಾ ಬೀಟೆ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಕೃತ್ಯ?
ಅಧಿಕಾರಿಗಳ ಅಂದಾಜಿನ ಪ್ರಕಾರ, ಜಪ್ತಿ ಮಾಡಲಾದ 14 ಬೀಟೆ ತುಂಡುಗಳು ಎರಡು ಬೃಹತ್ ಮರಗಳಿಗೆ ಸೇರಿದ್ದಾಗಿವೆ. ಆರೋಪಿ ಗಣೇಶ್ ಶೆಟ್ಟಿ ಇವುಗಳನ್ನು ಸುಮಾರು ಎರಡು-ಮೂರು ವರ್ಷಗಳ ಹಿಂದೆಯೇ ಕಡಿತಲೆ ಮಾಡಿ, ಜಮೀನಿನಲ್ಲಿ ಗುಂಡಿ ತೆಗೆದು ಮುಚ್ಚಿಟ್ಟಿದ್ದ ಎನ್ನಲಾಗುತ್ತಿದೆ. ಸದ್ಯ ಈ ಎಲ್ಲಾ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ನಾಪತ್ತೆ: ಪತ್ತೆಗೆ ಬಲೆ ಬೀಸಿದ ಅಧಿಕಾರಿಗಳು
ಅರಣ್ಯಾಧಿಕಾರಿಗಳು ಜಮೀನಿನ ಮೇಲೆ ದಾಳಿ ನಡೆಸುತ್ತಿದ್ದಂತೆ ಅದರ ಸುಳಿವು ಅರಿತ ಆರೋಪಿ ಗಣೇಶ್ ಶೆಟ್ಟಿ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಸದ್ಯ ಆರೋಪಿ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಆತನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿದ್ದ ದಕ್ಷ ಅಧಿಕಾರಿಗಳ ತಂಡ
ಅಕ್ರಮ ದಂದೆಗೆ ಬ್ರೇಕ್ ಹಾಕಿದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಲಗೇರಿ ಮಂಡ್ರಿಯ ಉಪ ವಲಯ ಅರಣ್ಯಾಧಿಕಾರಿ (DRFO) ನವೀನ್ ಕುಮಾರ್, ಬೀಟ್ ಫಾರೆಸ್ಟ್ ಅಧಿಕಾರಿಗಳಾದ ಪ್ರಶಾಂತ್, ಪುಟ್ಟಸ್ವಾಮಿ, ಗಿರೀಶ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಮತ್ತು ಪುನೀತ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಧಿಕಾರಿಗಳ ಈ ಸಮಯಪ್ರಜ್ಞೆ ಹಾಗೂ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BIG NEWS: ರೇಬಿಸ್ ಪೀಡಿತ, ಆಕ್ರಮಣಕಾರಿ ಬೀದಿ ನಾಯಿಗಳಿಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್!
BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ








