ಬೆಂಗಳೂರು : ಸರ್ಕಾರ ಮಂಜೂರು ಮಾಡಿರುವ ಜಮೀನುಗಳಿಗೆ ಸರ್ಕಾರವೇ ಪೋಡಿ ಮಾಡುವ ಅಭಿಯಾನ ಕೈಗೊಂಡಿದ್ದು, ಕಳೆದ ಒಂದು ವರ್ಷ ದಲ್ಲಿ 2.16 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಪೋಡಿ ಮಾಡಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಪರಿಷತ್ ನಲ್ಲಿ ಬಿಜೆಪಿ ಪ್ರತಾಪಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ 5,70,116 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1.60 ಲಕ್ಷ ಅರ್ಜಿಗಳು ಪಹಣಿ ತಿದ್ದುಪಡಿಯಾಗಿ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ಹಂತ ದಲ್ಲಿವೆ. 4.09 ಲಕ್ಷ ಅರ್ಜಿಗಳು ಅಳತೆ ಮತ್ತು ವಿವಿಧ ಹಂತದಲ್ಲಿ ಭೂ ಮಾಪನ ಇಲಾಖೆಯಲ್ಲಿ ಬಾಕಿಯಿವೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 60,943 ಅರ್ಜಿಗಳ ಪೋಡಿ ಮಾಡಲು ಆದೇಶಿಸಲಾಗಿದೆ. ಈ ಪೈಕಿ 23,621 ಅರ್ಜಿಗಳು ಪೋಡಿ ಆಗಿವೆ. ಉಳಿದ ಅರ್ಜಿಗಳನ್ನು ಡಿಸೆಂಬರ್‌ಒಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಭೂ ಅಳತೆ ಕಾರ್ಯ ತ್ವರಿತಗೊಳಿಸಲು ಭೂ ಮಾಪಕರಿಗೆ ಆಧುನಿಕ ಉಪಕರಣ ಹಂತ-ಹಂತವಾಗಿ ಖರೀದಿಸಿ ನೀಡಲಾಗುತ್ತಿದೆ. ಈಗಾಗಲೇ 590 ರೋವರ್ಸ್‌ಗಳನ್ನು ಭೂ ಮಾಪಕರಿಗೆ ನೀಡಲಾಗಿದೆ ಎಂದರು.
ಮಧ್ಯವರ್ತಿಗಳ ಹಾವಳಿ, ವಿಳಂಬ ತಪ್ಪಿಸಲು ಆಸ್ತಿ ನೋಂದಣಿ ನಂತರ ಖಾತೆ ಗಳು ಸ್ವಯಂ ಚಾಲಿತವಾಗಿ ಬದಲಾವಣೆ ಆಗುವಂತೆ ಆಟೋ ಮ್ಯುಟೇಶನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರಸ್ತುತ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದರು.








