ಶೂ ಖರೀದಿಯೊಂದಿಗೆ ಆರಂಭವಾದ ಒಂದು ಸಾಮಾನ್ಯ ವಿಷಯವು, ರೋಹ್ಟಕ್ನ 27 ವರ್ಷದ ಗ್ರಾಹಕರೊಬ್ಬರಿಗೆ ಕ್ಯಾರಿ ಬ್ಯಾಗ್ಗಾಗಿ 10 ರೂಪಾಯಿ ವಿಧಿಸಿದ ನಂತರ ಗ್ರಾಹಕ ನ್ಯಾಯಾಲಯದ ಮೊಕದ್ದಮೆಯಾಗಿ ಮಾರ್ಪಟ್ಟಿತು. ಮೂರು ವರ್ಷಗಳ ನಂತರ, ಹರಿಯಾಣದ ಗ್ರಾಹಕ ಆಯೋಗವು ಗ್ರಾಹಕನ ಪರವಾಗಿ ತೀರ್ಪು ನೀಡಿದ್ದು, ಆ ಮೊತ್ತವನ್ನು ವಾಪಸ್ ನೀಡುವಂತೆ ಮತ್ತು 8,000 ರೂಪಾಯಿ ಪರಿಹಾರ ಹಾಗೂ ಕಾನೂನು ವೆಚ್ಚವನ್ನು ಪಾವತಿಸುವಂತೆ ರೆಡ್ ಟೇಪ್ (Red Tape) ಪಾದರಕ್ಷೆ ಬ್ರ್ಯಾಂಡ್ಗೆ ನಿರ್ದೇಶನ ನೀಡಿದೆ. ಅಲ್ಲದೆ ಈ ಶುಲ್ಕವು ಅಸಮರ್ಥನೀಯ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ಅಧ್ಯಕ್ಷ ನಾಗೇಂದರ್ ಸಿಂಗ್ ಕಾಡಿಯನ್ ಮತ್ತು ಸದಸ್ಯರಾದ ತೃಪ್ತಿ ಪನ್ನು ಹಾಗೂ ಡಾ. ವಿಜೇಂದರ್ ಸಿಂಗ್ ಅವರನ್ನೊಳಗೊಂಡ ಆಯೋಗವು, 2023 ರಲ್ಲಿ ರೆಡ್ ಟೇಪ್ ಶೂ ಖರೀದಿಸಿ ಕ್ಯಾರಿ ಬ್ಯಾಗ್ಗಾಗಿ ಪ್ರತ್ಯೇಕವಾಗಿ 10 ರೂಪಾಯಿ ಪಾವತಿಸಿದ್ದ 27 ವರ್ಷದ ಗ್ರಾಹಕರು ಸಲ್ಲಿಸಿದ ದೂರನ್ನು ಆಲಿಸಿತು.
”ದೂರುದಾರರಿಂದ ಕ್ಯಾರಿ ಬ್ಯಾಗ್ಗಾಗಿ ಪ್ರತ್ಯೇಕವಾಗಿ 10/- ರೂ. ವಸೂಲಿ ಮಾಡಿರುವುದು ಗ್ರಾಹಕ ಸೇವಾ ನ್ಯೂನತೆ ಹಾಗೂ ಎದುರುದಾರರ (ರೆಡ್ ಟೇಪ್ ಲಿಮಿಟೆಡ್) ಕಡೆಯಿಂದ ಅನುಚಿತ ವ್ಯಾಪಾರ ಪದ್ಧತಿಯಾಗಿದೆ ಎಂದು ಈ ಆಯೋಗವು ದೃಢವಾಗಿ ಅಭಿಪ್ರಾಯಪಡುತ್ತದೆ,” ಎಂದು ಜೂನ್ 12 ರ ಆದೇಶದಲ್ಲಿ ತಿಳಿಸಲಾಗಿದೆ.
’ಕಂಪನಿಯ ಅಫಿಡವಿಟ್ ಗ್ರಾಹಕನಿಗೆ ಪೂರಕವಾಗಿತ್ತು’
ಕ್ಯಾರಿ ಬ್ಯಾಗ್ಗೆ ಅನಗತ್ಯವಾಗಿ ಶುಲ್ಕ ವಿಧಿಸಲಾಗಿದೆ ಎಂಬುದನ್ನು ರೆಡ್ ಟೇಪ್ ಕಂಪನಿಯು ತನ್ನ ಸ್ವಂತ ಅಫಿಡವಿಟ್ನಲ್ಲಿ (ಪ್ರಮಾಣಪತ್ರ) ಒಪ್ಪಿಕೊಂಡಿರುವುದನ್ನು ಆಯೋಗವು ಗಮನಿಸಿದೆ. ಇದು ವಾಸ್ತವವಾಗಿ ದೂರುದಾರರ ಆರೋಪಗಳಿಗೆ ಪೂರಕವಾದ ಸಾಕ್ಷ್ಯದಂತಿದೆ ಎಂದು ಆಯೋಗ ಹೇಳಿದೆ.
ಗ್ರಾಹಕರಿಂದ ಹಣವನ್ನು ತಪ್ಪಾಗಿ ವಸೂಲಿ ಮಾಡಲಾಗಿದೆ ಎಂಬುದನ್ನು ಅಫಿಡವಿಟ್ನ ಅಂಶಗಳು ಒಪ್ಪಿಕೊಂಡಂತಿದೆ ಎಂದು ಗ್ರಾಹಕ ನ್ಯಾಯಾಲಯವು ಗಮನಿಸಿದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ, ಕ್ಯಾರಿ ಬ್ಯಾಗ್ಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿ ಎರಡೂ ಆಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಯಿತು.
ಅದರಂತೆ, ಕ್ಯಾರಿ ಬ್ಯಾಗ್ನ ವೆಚ್ಚವಾದ 10 ರೂಪಾಯಿಯನ್ನು ಮರುಪಾವತಿಸಲು ಆಯೋಗವು ರೆಡ್ ಟೇಪ್ ಕಂಪನಿಗೆ ನಿರ್ದೇಶನ ನೀಡಿತು. ಇದರೊಂದಿಗೆ, ಸೇವಾ ನ್ಯೂನತೆಗಾಗಿ 4,000 ರೂಪಾಯಿ ಪರಿಹಾರ ಮತ್ತು ಕಾನೂನು ಹೋರಾಟದ ವೆಚ್ಚವಾಗಿ 4,000 ರೂಪಾಯಿಗಳನ್ನು 30 ದಿನಗಳ ಒಳಗೆ ಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ರೆಡ್ ಟೇಪ್ ಸಂಸ್ಥೆಗೆ ಆದೇಶಿಸಿದೆ.
ಕ್ಯಾರಿ ಬ್ಯಾಗ್ ಶುಲ್ಕಕ್ಕೆ ಆಕ್ಷೇಪ
ದೂರುದಾರರು ಏಪ್ರಿಲ್ 1, 2023 ರಂದು ರೆಡ್ ಟೇಪ್ ಲಿಮಿಟೆಡ್ ಶೋರೂಮ್ನಿಂದ 2,069.70 ರೂಪಾಯಿಗೆ ಕಪ್ಪು ಬಣ್ಣದ ರೆಡ್ ಟೇಪ್ ಶೂಗಳನ್ನು ಖರೀದಿಸಿದ್ದರು. ಆದರೆ, ಶೋರೂಮ್ನವರು ಕ್ಯಾರಿ ಬ್ಯಾಗ್ಗಾಗಿ 10 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.
ತಮಗೆ ಉಚಿತವಾಗಿ ಕ್ಯಾರಿ ಬ್ಯಾಗ್ ನೀಡುವಂತೆ ದೂರುದಾರರು ಸಿಬ್ಬಂದಿಯನ್ನು ಕೇಳಿಕೊಂಡಿದ್ದರು, ಆದರೆ ಅವರು ನಿರಾಕರಿಸಿದ್ದರು. ಕಂಪನಿಯ ನಿಯಮಾವಳಿಗಳ ಪ್ರಕಾರ ಕ್ಯಾರಿ ಬ್ಯಾಗ್ನ ವೆಚ್ಚವನ್ನು ಪಾವತಿಸಲೇಬೇಕು ಎಂದು ತಮಗೆ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕ್ಯಾರಿ ಬ್ಯಾಗ್ಗೆ ಶುಲ್ಕ ವಿಧಿಸುವ ರೆಡ್ ಟೇಪ್ ಕಂಪನಿಯ ಈ ಕ್ರಮ ಮತ್ತು ನಡವಳಿಕೆಯು ಕಾನೂನುಬಾಹಿರ, ನಿರಂಕುಶ ಮತ್ತು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಇದರಿಂದಾಗಿ ತಾವು ಮಾನಸಿಕ ಕಿರಿಕಿರಿ, ನೋವು ಮತ್ತು ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ದೂರುದಾರರು ಆರೋಪಿಸಿದ್ದರು.
ಹೀಗಾಗಿ, ಅವರು ಈ ದೂರನ್ನು ದಾಖಲಿಸಿ, ಕ್ಯಾರಿ ಬ್ಯಾಗ್ನ ವೆಚ್ಚವನ್ನು ಬಡ್ಡಿ ಸಮೇತ ವಾಪಸ್ ಕೊಡಿಸಲು, ತಮಗಾದ ಕಿರುಕುಳಕ್ಕೆ 50,000 ರೂಪಾಯಿ ಪರಿಹಾರ ಮತ್ತು 22,000 ರೂಪಾಯಿ ಕಾನೂನು ವೆಚ್ಚವನ್ನು ಕೊಡಿಸಲು ನ್ಯಾಯಾಲಯಕ್ಕೆ ವಿನಂತಿಸಿದ್ದರು.
ವಸ್ತುಗಳನ್ನು ‘ತಲುಪಿಸುವ ಸ್ಥಿತಿ’ಯಲ್ಲಿ ನೀಡುವುದು ವ್ಯಾಪಾರಿಯ ಕರ್ತವ್ಯ
ದೂರುದಾರರ ಪರವಾಗಿ ವಾದ ಮಂಡಿಸಿದ ವಕೀಲ ಸಂದೀಪ್ ಕುಮಾರ್, ರೆಡ್ ಟೇಪ್ ಕಂಪನಿಯು ಬ್ಯಾಗ್ನ ವೆಚ್ಚವನ್ನು ವಸೂಲಿ ಮಾಡಲು ಸಾಧ್ಯವಿಲ್ಲ ಮತ್ತು ಗ್ರಾಹಕರಿಗೆ ವಸ್ತುಗಳನ್ನು ‘ತಲುಪಿಸುವ ಸ್ಥಿತಿ’ಯಲ್ಲಿ (ಡೆಲಿವರೇಬಲ್ ಸ್ಟೇಟ್) ನೀಡುವುದು ಅಂಗಡಿಕಾರರ ಮತ್ತು ಕಂಪನಿಗಳ ಕರ್ತವ್ಯವಾಗಿದೆ ಎಂದು ವಾದಿಸಿದರು.
ಅಂಗಡಿಕಾರರು ಈ ಬ್ಯಾಗ್ಗಳ ವೆಚ್ಚವನ್ನು ತಮ್ಮ ವ್ಯಾಪಾರ ನಿರ್ವಹಣೆಯ ಒಂದು ಭಾಗವೆಂದೇ ಪರಿಗಣಿಸಬೇಕು ಮತ್ತು ಅದನ್ನು ನೀಡುವುದು ಮೂಲಭೂತ ಸೇವೆಯ ನಿರೀಕ್ಷೆಯಾಗಿದೆ ಎಂದು ಅವರು ವಾದ ಮಂಡಿಸಿದರು.
’ಗ್ರಾಹಕರು ತಮ್ಮದೇ ಬ್ಯಾಗ್ ತರುವುದನ್ನು ನಾವು ತಡೆದಿಲ್ಲ’
ಪಾದರಕ್ಷೆ ಬ್ರ್ಯಾಂಡ್ನ ಪರವಾಗಿ ಹಾಜರಾದ ವಕೀಲ ಮುಕೇಶ್ ಸಿಂಗ್, ಈ ದೂರು ಸುಳ್ಳು, ಕ್ಷುಲ್ಲಕ, ತಪ್ಪು ಕಲ್ಪನೆಯಿಂದ ಕೂಡಿದ್ದು ಮತ್ತು ಕಾನೂನುಬದ್ಧವಾಗಿ ನಿಲ್ಲುವಂಥದ್ದಲ್ಲ, ಹಾಗಾಗಿ ಇದನ್ನು ವಜಾಗೊಳಿಸಬೇಕು ಎಂದು ವಾದಿಸಿದರು.
ಮರಗಳನ್ನು ಮತ್ತು ಪರಿಸರವನ್ನು ಉಳಿಸುವ ಸಂದೇಶವನ್ನು ನೀಡುವ ಮೂಲಕ ಗ್ರಾಹಕರು ಪರಿಸರ ಸ್ನೇಹಿಯಾಗಿರುವಂತೆ ಪ್ರೋತ್ಸಾಹಿಸಲು ಮತ್ತು ಉಚಿತವಾಗಿ ನೀಡಿದಾಗ ಗ್ರಾಹಕರು ದುರುಪಯೋಗಪಡಿಸಿಕೊಳ್ಳುವ ಕ್ಯಾರಿ ಬ್ಯಾಗ್ಗಳ ಬಳಕೆಯನ್ನು ಕಡಿಮೆ ಮಾಡಲು ಕಂಪನಿಯು ಈ ಶುಲ್ಕ ವಿಧಿಸಿದೆ ಎಂದು ಪ್ರತಿವಾದ ಮಂಡಿಸಲಾಯಿತು.
ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮತ್ತು ಹೆಚ್ಚುವರಿ ಬ್ಯಾಗ್ಗಳ ಬಳಕೆಯನ್ನು ತಪ್ಪಿಸಲು ಗ್ರಾಹಕರು ತಮ್ಮದೇ ಆದ ಕ್ಯಾರಿ ಬ್ಯಾಗ್ಗಳನ್ನು ತರಲು ಕೋರಿ ಶೋರೂಮ್ನ ಪ್ರವೇಶದ್ವಾರದಲ್ಲೇ ಮಾಹಿತಿ ಫಲಕವನ್ನು ಹಾಕಲಾಗಿತ್ತು. ಅದರಂತೆ ದೂರುದಾರರು ತಮ್ಮ ಒಪ್ಪಿಗೆಯಿಂದಲೇ ಈ ಪೇಪರ್ ಬ್ಯಾಗ್ ಖರೀದಿಸಿದ್ದಾರೆ ಎಂದು ಸಲ್ಲಿಕೆ ಮಾಡಲಾಯಿತು.
ಕಂಪನಿಯು ದೂರುದಾರರಿಗೆ ಮತ್ತು ಇತರ ಗ್ರಾಹಕರಿಗೆ ಕ್ಯಾರಿ ಬ್ಯಾಗ್ ಖರೀದಿಸುವ ಆಯ್ಕೆಯನ್ನು ಮಾತ್ರ ನೀಡಿದೆ, ಅದು ಕೂಡ ಗ್ರಾಹಕರ ಒಪ್ಪಿಗೆಯೊಂದಿಗೆ ನಡೆದಿದೆ. ಯಾವುದೇ ಗ್ರಾಹಕರಿಗೆ ಕ್ಯಾರಿ ಬ್ಯಾಗ್ ಖರೀದಿಸುವುದನ್ನು ಕಡ್ಡಾಯಗೊಳಿಸಿಲ್ಲ ಎಂದು ವಾದಿಸಲಾಯಿತು.
ಕಂಪನಿಯು ಮಾರಾಟ ಮಾಡುವ ಕ್ಯಾರಿ ಬ್ಯಾಗ್ಗಳು ಯಾವುದೇ ಬ್ರ್ಯಾಂಡಿಂಗ್ ಹೊಂದಿಲ್ಲ ಮತ್ತು ಅವುಗಳು ರೆಡ್ ಟೇಪ್ನ ಲೋಗೋ ಅಥವಾ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವುದಿಲ್ಲ ಎಂದು ತಿಳಿಸಲಾಯಿತು. ಗ್ರಾಹಕರು ಶಾಪಿಂಗ್ ಮಾಡಲು ತಮ್ಮದೇ ಕ್ಯಾರಿ ಬ್ಯಾಗ್ಗಳನ್ನು ತರುವುದನ್ನು ಕಂಪನಿ ಎಂದಿಗೂ ತಡೆದಿಲ್ಲ ಎಂದು ವಾದಿಸಲಾಯಿತು.
ಈ ತೀರ್ಪು ಗ್ರಾಹಕ ಜಾಗೃತಿಯ ಮಹತ್ವವನ್ನು ಮತ್ತು ಸಣ್ಣ ಶುಲ್ಕಗಳನ್ನೂ ಪ್ರಶ್ನಿಸುವ ಪ್ರಜ್ಞಾವಂತ ಗ್ರಾಹಕನ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಕೇವಲ 10 ರೂಪಾಯಿ ಕ್ಯಾರಿ ಬ್ಯಾಗ್ ಶುಲ್ಕದ ಮೇಲಿನ ವಿವಾದವು ಅಂತಿಮವಾಗಿ ಅನುಚಿತ ವ್ಯಾಪಾರ ಪದ್ಧತಿಯ ತೀರ್ಪಿಗೆ ಕಾರಣವಾಯಿತು. ಇದು ಗ್ರಾಹಕರ ಹಕ್ಕುಗಳು ಒಳಗೊಂಡಿರುವ ಮೊತ್ತದ ಮೇಲಲ್ಲ, ಬದಲಿಗೆ ಅಲ್ಲಿನ ತತ್ವದ ಮೇಲೆ ನಿರ್ಧಾರವಾಗುತ್ತವೆ ಎಂಬುದನ್ನು ಸಾಬೀತುಪಡಿಸಿದೆ.








