ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಐವರು ಉದ್ಯೋಗಿಗಳಿಗೆ ಜಿಎಂ ಮುಕುಲ್ ಸರನ್ ಮಾಥುರ್ ಅವರು ಸುರಕ್ಷತಾ ಪ್ರಶಸ್ತಿ ನೀಡಿ ಗೌರವಿಸಿದರು.
ಇಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲು ಸೌಧದ ಜಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಇಂದು ಸುರಕ್ಷತಾ ಸಭೆ ನಡೆಸಿದರು.
ಈ ಸಭೆಯ ನಂತರ, ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ತೋರಿದ ಜಾಗರೂಕತೆ, ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಮತ್ತು ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿನ ಕೊಡುಗೆಯನ್ನು ಗುರುತಿಸಿ 05 ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಹುಬ್ಬಳ್ಳಿ ವಿಭಾಗದ ಶಿವಾಜಿ ಎಲ್. ಪವಾರ್, ಬೆಂಗಳೂರು ವಿಭಾಗದ ಕೈಲಾಶ್ ಪ್ರಸಾದ್ ಮೀನಾ ಮತ್ತು ಎಚ್. ಎಸ್. ಮಹೇಶ್, ಹಾಗೂ ಮೈಸೂರು ವಿಭಾಗದ ಜೆ.ಬಿ. ಲೋಹಿತ್ ಮತ್ತು ಅಬು ಸಾಲಿಯಾ ಅವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಕುಲ್ ಸರನ್ ಮಾಥುರ್ ಅವರು, ಸಿಬ್ಬಂದಿಗಳ ತ್ವರಿತ ಚಿಂತನೆ ಮತ್ತು ಸಮರ್ಪಣಾ ಭಾವವನ್ನು ಶ್ಲಾಘಿಸಿದರು. “ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ” ಎಂಬ ನೈಋತ್ಯ ರೈಲ್ವೆಯ ಧ್ಯೇಯವನ್ನು ಪುನರುಚ್ಚರಿಸಿದರು.