ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ತೃಣಮೂಲ ಕಾಂಗ್ರೆಸ್‌ನ (TMC) ಆರೋಪದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಇಡೀ ರಾಜ್ಯದ ಪ್ರಕ್ರಿಯೆಯನ್ನು ಒಂದೇ ಅರ್ಜಿಯಲ್ಲಿ ಪ್ರಶ್ನಿಸುವ ಬದಲು, ಯಾವ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆಯೋ ಅಂತಹ ಕ್ಷೇತ್ರಗಳ ಬಗ್ಗೆ ಪ್ರತ್ಯೇಕ ಅರ್ಜಿ (Separate Pleas) ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿದೆ.
ಸೋಮವಾರ (ಮೇ 11, 2026) ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ವಿಚಾರಣೆ ನಡೆಸಿತು:ಟಿಎಂಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ, ಸುಮಾರು 31 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತಲೂ ಅಲ್ಲಿ ಕೈಬಿಡಲಾದ (Deleted) ಮತದಾರರ ಸಂಖ್ಯೆ ಹೆಚ್ಚಿದೆ ಎಂದು ದೂರಿದರು. ಉದಾಹರಣೆಗೆ, ಒಂದು ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ 862 ಮತಗಳಿಂದ ಸೋತಿದ್ದರೆ, ಅಲ್ಲಿ 5,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಇಂತಹ ನಿರ್ದಿಷ್ಟ ಅಂಕಿ-ಅಂಶಗಳಿರುವ ಪ್ರಕರಣಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಇತರ ಬಾಧಿತರು ಹೊಸದಾಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲು ಸ್ವತಂತ್ರರು ಎಂದು ಕೋರ್ಟ್ ಹೇಳಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿರುವ ವಿರುದ್ಧ ಸಲ್ಲಿಕೆಯಾಗಿರುವ ಸುಮಾರು 35 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಪ್ರಸ್ತುತ ವೇಗದಲ್ಲಿ ಹೋದರೆ 4 ವರ್ಷ ಬೇಕಾಗಬಹುದು ಎಂದು ಟಿಎಂಸಿ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ನ್ಯಾಯ ಒದಗಿಸುವ ಅಗತ್ಯವನ್ನು ಕೋರ್ಟ್ ಒತ್ತಿಹೇಳಿದೆ.








