ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಮಾಹಿತಿ ತಂತ್ರಜ್ಞಾನ (IT) ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದು, ‘EPFO 3.0’ ಯೋಜನೆಯನ್ನು ಜಾರಿಗೆ ತರುತ್ತಿದೆ. 2026ರ ಮಧ್ಯಭಾಗದ ವೇಳೆಗೆ ಈ ವ್ಯವಸ್ಥೆಯು ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಈ ನೂತನ ಡಿಜಿಟಲ್ ವ್ಯವಸ್ಥೆಯಿಂದಾಗಿ ಕೋಟ್ಯಂತರ ಉದ್ಯೋಗಿಗಳು ಇನ್ನು ಮುಂದೆ ಪಿಎಫ್ ಹಣ ಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ.
ಇತ್ತೀಚೆಗೆ ಲೋಕಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಆಟೋ-ಕ್ಲೈಮ್ ಸೆಟಲ್ಮೆಂಟ್ ಮತ್ತು ಕೇಂದ್ರೀಕೃತ ಪೆನ್ಷನ್ ಪಾವತಿ ವ್ಯವಸ್ಥೆ (CPPS) ಸೇರಿದಂತೆ ಈ ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
EPFO 3.0 ಮೂಲಕ ಆಗಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:
UPI ಮೂಲಕ ಹಣ ವಿತ್ಡ್ರಾ: ಇನ್ಮುಂದೆ ಪಿಎಫ್ ಹಣವನ್ನು ನೇರವಾಗಿ UPI ಮೂಲಕವೇ ಪಡೆಯುವ ಸೌಲಭ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಇದರಿಂದ ಹಣಕ್ಕಾಗಿ ಹತ್ತಾರು ದಿನ ಕಾಯುವ ತಲೆನೋವು ತಪ್ಪಲಿದೆ.
₹5 ಲಕ್ಷದವರೆಗೆ ಆಟೋ-ಸೆಟಲ್ಮೆಂಟ್: ಈ ಹಿಂದೆ ಕೇವಲ 1 ಲಕ್ಷ ರೂಪಾಯಿವರೆಗಿನ ಕ್ಲೈಮ್ಗಳನ್ನು ಮಾತ್ರ ಸ್ವಯಂಚಾಲಿತವಾಗಿ (ಯಾವುದೇ ಅಧಿಕಾರಿಯ ಹಸ್ತಕ್ಷೇಪವಿಲ್ಲದೆ) ವಿಲೇವಾರಿ ಮಾಡಲಾಗುತ್ತಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಇದರಿಂದ ಸುಮಾರು 70% ಕ್ಲೈಮ್ಗಳು ತಕ್ಷಣವೇ ಇತ್ಯರ್ಥವಾಗಲಿವೆ.
ಕೆಲಸ ಬದಲಿಸಿದರೆ ಪಿಎಫ್ ವರ್ಗಾವಣೆ ಇನ್ನು ಈಜಿ: ಹೊಸ ಉದ್ಯೋಗಕ್ಕೆ ಸೇರಿದಾಗ ಹಳೆಯ ಪಿಎಫ್ ಹಣವನ್ನು ವರ್ಗಾವಣೆ ಮಾಡಲು ಕಂಪನಿಯ ಮಾಲೀಕರ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ. ನಿಮ್ಮ KYC ಪೂರ್ಣಗೊಂಡಿದ್ದರೆ, ವರ್ಗಾವಣೆ ಪ್ರಕ್ರಿಯೆ ತಾನಾಗಿಯೇ ನಡೆಯುತ್ತದೆ.
ದೇಶದ ಯಾವುದೇ ಬ್ಯಾಂಕ್ನಲ್ಲಿ ಪೆನ್ಷನ್: ಹೊಸ ಕೇಂದ್ರೀಕೃತ ಪೆನ್ಷನ್ ವ್ಯವಸ್ಥೆಯಿಂದಾಗಿ (CPPS), ಪೆನ್ಷನ್ದಾರರು ಭಾರತದ ಯಾವುದೇ ಬ್ಯಾಂಕ್ನ ಯಾವುದೇ ಶಾಖೆಯಿಂದ ಸುಲಭವಾಗಿ ತಮ್ಮ ಹಣವನ್ನು ಪಡೆಯಬಹುದು.
ಬಡ್ಡಿ ದರ: 2025-26ನೇ ಸಾಲಿಗೆ ಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 8.25% ರಷ್ಟು ಮುಂದುವರಿಸಲಾಗಿದೆ.








