ನವದೆಹಲಿ ಪಿಎಫ್ (PF) ಖಾತೆ ಹೊಂದಿರುವ ಉದ್ಯೋಗಿಗಳು ಕೆಲವು ಪ್ರಮುಖ ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಿಯಮಗಳನ್ನು ಕಟ್ಟುನಿಟ್ಟಾಗಿಸಿದೆ. ಅವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಇ-ನಾಮಿನೇಷನ್ (e-Nomination).
ಹಿಂದೆ ನಾಮಿನೇಷನ್ ಪ್ರಕ್ರಿಯೆ ಕಡ್ಡಾಯವಾಗಿರಲಿಲ್ಲ. ಆದರೆ ಈಗ ನಾಮಿನಿ (ವಾರಸುದಾರರ) ವಿವರಗಳನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಇ-ನಾಮಿನೇಷನ್ ಮಾಡದಿದ್ದರೆ, ಆನ್‌ಲೈನ್‌ನಲ್ಲಿ ಇಪಿಎಫ್‌ಒ ಒದಗಿಸುವ ಯಾವುದೇ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಲವರು ನಾಮಿನಿ ವಿವರ ಅಪ್‌ಡೇಟ್ ಮಾಡುವುದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇನ್ಮುಂದೆ ಇದು ನಡೆಯಲ್ಲ. ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನಾಮಿನಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಅಪ್‌ಡೇಟ್ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ನಾಮಿನಿ ವಿವರ ಏಕೆ ಅಗತ್ಯ?
ಪಿಎಫ್ ಖಾತೆದಾರರಿಗೆ ಅಕಸ್ಮಾತ್ ಯಾವುದೇ ಅಪಘಾತ ಸಂಭವಿಸಿ ಮರಣ ಹೊಂದಿದರೆ, ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಸಿಗಲಿ ಎಂಬ ಉದ್ದೇಶದಿಂದ ಈ ನಿಯಮ ತರಲಾಗಿದೆ. ಖಾತೆದಾರರ ಮರಣದ ನಂತರ ಪಿಎಫ್ ಖಾತೆಯಲ್ಲಿರುವ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.
ಇದರೊಂದಿಗೆ, ಇಪಿಎಫ್‌ಒ ಉದ್ಯೋಗಿಗಳಿಗೆ 7 ಲಕ್ಷ ರೂಪಾಯಿಗಳ ಉಚಿತ ಜೀವ ವಿಮೆ (EDLI Scheme) ಸೌಲಭ್ಯವನ್ನೂ ನೀಡುತ್ತದೆ. ಉದ್ಯೋಗದಲ್ಲಿರುವಾಗಲೇ ನೌಕರ ಮರಣ ಹೊಂದಿದರೆ, ಈ 7 ಲಕ್ಷ ರೂ. ವಿಮಾ ಮೊತ್ತವನ್ನು ನಾಮಿನಿಗೆ ಹಸ್ತಾಂತರಿಸಲಾಗುತ್ತದೆ. ಹೀಗಾಗಿ ನಾಮಿನಿ ವಿವರಗಳನ್ನು ನೀಡುವುದು ಅತ್ಯಗತ್ಯ.
ನೆನಪಿಡಿ: ಒಂದು ವೇಳೆ ನೀವು ನಾಮಿನಿ ವಿವರಗಳನ್ನು ನೀಡದಿದ್ದರೆ, ನಿಮ್ಮ ಪಿಎಫ್ ಹಣವನ್ನು ಕ್ಲೈಮ್ ಮಾಡಲು ಕುಟುಂಬ ಸದಸ್ಯರು ಭವಿಷ್ಯದಲ್ಲಿ ಕಚೇರಿಗಳಿಂದ ಕಚೇರಿಗೆ ಅಲೆಯಬೇಕಾಗುತ್ತದೆ ಮತ್ತು ದೊಡ್ಡ ಮಟ್ಟದ ತೊಂದರೆ ಎದುರಿಸಬೇಕಾಗುತ್ತದೆ. ಅದೇ ಮುಂಚಿತವಾಗಿ ಆನ್‌ಲೈನ್‌ನಲ್ಲಿ ನಾಮಿನಿ ಅಪ್‌ಡೇಟ್ ಮಾಡಿದರೆ ಯಾವುದೇ ದಾಖಲೆಗಳಿಲ್ಲದೆ ಸುಲಭವಾಗಿ ಹಣ ಸಿಗುತ್ತದೆ.
ಆನ್‌ಲೈನ್‌ನಲ್ಲಿ ಇ-ನಾಮಿನೇಷನ್ ಮಾಡುವುದು ಹೇಗೆ? ಸರಳ ಹಂತಗಳು ಇಲ್ಲಿವೆ:
ಹಂತ 1: ಮೊದಲು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ಗೆ https://www.epfindia.gov.in/ ಭೇಟಿ ನೀಡಿ.
ಹಂತ 2: ಹೋಮ್ ಪೇಜ್‌ನಲ್ಲಿರುವ ‘Services’ ಆಯ್ಕೆಯನ್ನು ಆರಿಸಿ.
ಹಂತ 3: ಅಲ್ಲಿ ಕಾಣಿಸುವ ‘For Employees’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ‘UAN Online Service (OCS/OTCP)’ ಆಯ್ಕೆಯನ್ನು ಆಯ್ದುಕೊಳ್ಳಿ.
ಹಂತ 5: ನಿಮ್ಮ UAN ನಂಬರ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ.
ಹಂತ 6: ಲಾಗಿನ್ ಆದ ನಂತರ ಮೆನು ಬಾರ್‌ನಲ್ಲಿರುವ ‘Manage’ ಆಪ್ಷನ್ ಸೆಲೆಕ್ಟ್ ಮಾಡಿ.
ಹಂತ 7: ಅಲ್ಲಿ ಕಾಣಿಸುವ ‘E-Nomination’ ಮೇಲೆ ಕ್ಲಿಕ್ ಮಾಡಿ.
ಹಂತ 8: ಆಗ ಸ್ಕ್ರೀನ್ ಮೇಲೆ ‘Having Family’ ಎಂದು ಕೇಳುತ್ತದೆ, ಅಲ್ಲಿ ‘Yes’ ಎಂದು ಆಯ್ಕೆ ಮಾಡಿ.
ಹಂತ 9: ಈಗ ನಾಮಿನಿಯ ಆಧಾರ್ ನಂಬರ್, ಹೆಸರು, ಲಿಂಗ (Gender), ಜನ್ಮ ದಿನಾಂಕ, ನಿಮಗೂ ಅವರಿಗೂ ಇರುವ ಸಂಬಂಧ ಮತ್ತು ಅವರ ವಿಳಾಸದ ವಿವರಗಳನ್ನು ನಮೂದಿಸಿ.
ಹಂತ 10: ನಂತರ ನಾಮಿನಿಯ ಭಾವಚಿತ್ರವನ್ನು (Photo) ಅಪ್‌ಲೋಡ್ ಮಾಡಿ.
ಹಂತ 11: ಒಂದು ವೇಳೆ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬೇಕಿದ್ದರೆ ‘Add Row’ ಮೇಲೆ ಕ್ಲಿಕ್ ಮಾಡಿ ವಿವರ ತುಂಬಬಹುದು.
ಹಂತ 12: ನಾಮಿನಿಗೆ ನಿಮ್ಮ ಪಿಎಫ್ ಹಣದಲ್ಲಿ ಎಷ್ಟು ಶೇಕಡಾ ಹಂಚಿಕೆ (Share) ನೀಡಬೇಕೆಂದು ನಮೂದಿಸಿ, ‘Save Family Details’ ಮೇಲೆ ಕ್ಲಿಕ್ ಮಾಡಿ.
ಹಂತ 13: ಕೊನೆಯದಾಗಿ ‘E-Sign’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿ (OTP) ನಮೂದಿಸಿದರೆ ಇ-ನಾಮಿನೇಷನ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.








