ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ( BBMP Election ) ಸಕಲ ಸಿದ್ಧತೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ವತಿಯಿಂದ ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಇಂದು ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಬಸವರಾಜು ಹಾಗೂ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ಅಧ್ಯಕ್ಷತೆಯಲ್ಲಿ ಜಂಟಿ ಮಾಧ್ಯಮ ಗೋಷ್ಠಿಯನ್ನು ನಡೆಸಲಾಯಿತು. ಈ ಸುದ್ಧಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022ರ ಸಂಬಂಧ 243 ವಾರ್ಡ್ ವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ -2022 ರ ಚುನಾವಣೆ ಸಂಬಂಧ ಸರ್ಕಾರದ ಅಧಿಸೂಚನೆ ಸಂಖ್ಯೆ: ನಇ 66 ಬಿಬಿಎಸ್ 2022, ಬೆಂಗಳೂರು, ದಿನಾಂಕ: 14.07.2022 ರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್ಗಳ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಪ್ರತಿ ವಾರ್ಡಿನ ಗಡಿಗಳನ್ನು ಗುರುತಿಸಿ ಅಂತಿಮ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ. ರಾಜ್ಯ ಚುನಾವಣಾ ಆಯೋಗ ರವರ ಸುತ್ತೋಲೆ ಸಂಖ್ಯೆ: ರಾಚುಅ 149 ಇಯುಬಿ 2022, ದಿನಾಂಕ: 15.07.2022 ರಂತೆ ವಾರ್ಡ್ವಾರು ಮತದಾರರ ಪಟ್ಟಿಯನ್ನು ತಯಾರಿಸುವ ಸಂಬಂಧ ಸೂಚನೆ ಮತ್ತು ವೇಳಾಪಟ್ಟಿಯನ್ನು ನೀಡಲಾಗಿರುತ್ತದೆ.
ಅದರಂತೆ, ವಿಧಾನಸಭಾ ಕ್ಷೇತ್ರವಾರು ದಿನಾಂಕ: 31.07.2022 ರವರೆಗಿನ ಮತದಾರರ ಮಾಹಿತಿಯನ್ನು ವಾರ್ಡ್ ವಾರು ಪುನರ್ ವಿಂಗಡಿಸಿ ಪಾಲಿಕೆಯ ವಾರ್ಡ್ ವಾರು ಮತದಾರರ ಪಟ್ಟಿಯನ್ನು ಸಿದ್ದಗೊಳಿಸಲಾಗಿರುತ್ತದೆ. ಈ ಪೈಕಿ ಪಾಲಿಕೆಯ 243 ವಾರ್ಡ್ ಗಳಲ್ಲಿ ಒಟ್ಟು 79,08,394 ಮತದಾರರಿರುತ್ತಾರೆ. ಅದರಲ್ಲಿ 4109496 ಪುರುಷರು, 3797497 ಮಹಿಳೆಯರು ಹಾಗೂ 1401 ಇತರೆ ಮತದಾರರಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 25.08.2022 ರಂದು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ವಾರು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ವಲಯ ಜಂಟಿ ಆಯುಕ್ತರುಗಳ ಕಛೇರಿ ಆಯಾ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿ/ಸಹಾಯಕ ಮತದಾರರ ನೊಂದಣಾಧಿಕಾರಿ ಮತ್ತು ವಾರ್ಡ್ ಕಛೇರಿಗಳಲ್ಲಿ ಹಾಗೂ www.bbmp.gov.in ನಲ್ಲಿ ಪ್ರಚುರ ಪಡಿಸಲಾಗಿರುತ್ತದೆ.
ಸಾರ್ವಜನಿಕರು/ಮತದಾರರು ತಮ್ಮ ಹಾಗೂ ಕುಟುಂಬದ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು(Claims and Objections) ದಿನಾಂಕ: 25.08.2022 ರಿಂದ 02.09.2022 ರವರೆಗೆ ಸಂಬಂಧಪಟ್ಟ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲಿ ಸಲ್ಲಿಸಬಹುದಾಗಿರುತ್ತದೆ.
ಮುಂದುವರೆದು ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಆ್ಯಪ್ ಆದ Voter Helpline App ಮತ್ತು NVSP Portal ವೆಬ್ಸೈಟ್ ಮುಖೇನಾ ವಿಧಾನಸಭಾ ಕ್ಷೇತ್ರವಾರು ಅರ್ಜಿ ಸಲ್ಲಿಸಿದ್ದಲ್ಲಿ ಮುಂದಿನ ಹಂತದಲ್ಲಿ ಪರಿಶೀಲಿಸಿ ವಾರ್ಡ್ವಾರು ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲು ಕ್ರಮವಹಿಸಲಾಗುತ್ತದೆ.
ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾ ಅಧಿಕಾರಿ(ಕೇಂದ್ರ) ರಂಗಪ್ಪ, ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯಾದ ಹೊನ್ನಮ್ಮ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.