ಬೆಂಗಳೂರು : ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದರು. ಇದಕ್ಕೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಏಕನಾಥ ಶಿಂಧೆಗೆ ತಿರುಗೇಟು ನೀಡಿದ್ದು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮಾಜಿ ಆಗ್ತಾರೆ ‘ಮಹಾ’ ಸರ್ಕಾರವೇ ಬೀಳುತ್ತದೆ ಎಂದು ಭವಿಷ್ಯ ನುಡಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳುದ ಶಿಂಧೆ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಓದಲಿ.ನಮ್ಮ ಪಕ್ಷದಲ್ಲಿ ಅಂತಹ ಶಾಸಕರಿಲ್ಲ. ಬೇರೆ ಪಕ್ಷದ ಐದಾರು ಮಂದಿ ನಮ್ಮ ಜೊತೆಗಿದ್ದಾರೆ. ನಮ್ಮ ಜೊತೆ ಬಹಿರಂಗವಾಗಿ ಕೆಲವರು ಗುರ್ತಿಸಿಕೊಂಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂದು ಹೇಳಿಕೆ ನೀಡಿರುವ ಏಕನಾಥ್ ಶಿಂಧೆ ಅವರ ಸರ್ಕಾರ ಪತನವಾಗಲಿದೆ ಎಂದರು.
ಕರ್ನಾಟಕದಲ್ಲಿ 89 ಶಾಸಕರು ಹೋದರೆ ಸರ್ಕಾರ ಬೀಳಬಹುದು. ಆದರೆ ಬಿಜೆಪಿ,ಜೆಡಿಎಸ್ ನಿಂದ 15, 20 ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿ ಅವರಿದ್ದಾರೆ. ಇದರ ಬಗ್ಗೆ ಹೋಗಿ ಏಕನಾಥ್ ಶಿಂಧೆ ಬಳಿ ಕೇಳಿ ಮಹಾರಾಷ್ಟ್ರದಲ್ಲಿ ಅವರ ಸರ್ಕಾರವೇ ಬೀಳಲಿದೆ. ಉದ್ಧವ್ ಠಾಕ್ರೆ ಪರ ಅಲ್ಲಿ ಜನ ಇದ್ದಾರೆ.ಠಾಕ್ರೆ ತೊರೆದು ಶಿಂಧೆ ಜೊತೆಗೆ ಹೋದವರು ಪಶ್ಚಾತ್ತಾಪ ಪಡ್ತಿದ್ದಾರೆ ಎಂದು ಎಂಬಿ ಪಾಟೀಲ್ ಹೇಳಿದರು.
ಹಾಗಾದರೆ ಶಿಂಧೆ ಹೇಳಿದ್ದೇನು?
ಮಹಾರಾಷ್ಟ್ರದ ಸತಾರಾದಲ್ಲಿ ಮಾತನಾಡಿದ ಶಿಂಧೆ, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ.ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ’ ಆಪರೇಷನ್ ಮಾಡೋದಿದೆ’ ಅಂದಿದ್ದಾರೆ ಎಂದು ಹೇಳಿದರು.