ಬೆಂಗಳೂರು: ಯಾವುದೇ ಸಮುದಾಯ ಕೇವಲ ತನ್ನ ಜನಸಂಖ್ಯೆಯಿಂದ ಬಲಾಢ್ಯವಾಗಲು ಸಾಧ್ಯವಿಲ್ಲ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದರೆ ಮಾತ್ರ 21ನೇ ಶತಮಾನದಲ್ಲಿ ಪ್ರಭಾವಿಯಾಗಬಹುದಷ್ಟೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತೀಕರಣದ ಯುಗದಲ್ಲಿ ಶೈಕ್ಷಣಿಕ ಉನ್ನತಿ ಸಾಧಿಸುವವರು ಮಾತ್ರ ಉಜ್ವಲ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟ ಮತ್ತು ಉತ್ಕೃಷ್ಟತೆಗಳು ಮಾತ್ರ ನಿಜವಾದ ಶಕ್ತಿಗಳಾಗಿವೆ ಎಂದು ಅವರು ನುಡಿದರು.
ಸಮಾಜದ ಎಲ್ಲಾ ಸಮುದಾಯಗಳ ಸಮಾನ ಅಭಿವೃದ್ಧಿ ಸಾಧ್ಯವಾಗಬೇಕು ಎನ್ನುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರ ಅನುಷ್ಠಾನದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಆರೋಪ ಅವರಿಗೇ ತಿರುಗುಬಾಣವಾಗಲಿದೆ – ಸಿಎಂ ಬಸವರಾಜ ಬೊಮ್ಮಾಯಿ
ಇಷ್ಟೇ ಅಲ್ಲದೆ, ಮೋದಿಯವರು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇಕಡ ಹತ್ತರಷ್ಟು ಮೀಸಲಾತಿಯನ್ನು ಕೊಡುವ ನೀತಿಯನ್ನು ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಪಿ.ಸಿ.ಮೋಹನ್, ಮಹಾಸಭಾದ ರವಿಶಂಕರ್, ಶಾಸಕ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.