ಕನಕಪುರ: “ಭೂ ವ್ಯಾಜ್ಯಗಳಿಂದಾಗಿ ಜನ ಪೊಲೀಸ್ ಠಾಣೆಗೆ ಹೋಗಬಾರದು, ಬಡವರು ಲಂಚ ನೀಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಮರು ಭೂ ಮಾಪನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮಾಡಿದ್ದು, ಮುಂದೆ ಇಡೀ ತಾಲೂಕಿಗೆ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಹಾಗೂ ಮರು ಭೂ ಮಾಪನ ಯೋಜನೆಯಡಿ ರೈತರಿಗೆ ಜಮೀನಿನ ಆರ್ ಟಿಸಿ ದಾಖಲೆ ನೀಡುವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
“ನೂರಾರು ವರ್ಷಗಳ ಹಿಂದೆ ಬ್ರಿಟೀಷರು ಈ ಭಾಗದಲ್ಲಿ ಭೂ ಮಾಪನ ಮಾಡಿದ್ದರು. ಆನಂತರ ಮಾಡಿರಲಿಲ್ಲ. ಈಗ ಹೊಸ ಮಾದರಿಯಲ್ಲಿ ಭೂ ಮಾಪನ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಇದು ಮುಂದಿನ ತಲೆಮಾರಿಗೂ ಬಹಳ ಉಪಯೋಗವಾಗಲಿದೆ” ಎಂದು ತಿಳಿಸಿದರು.
“ಡಿ.ಕೆ. ಸುರೇಶ್ ಹಾಗೂ ಕೃಷ್ಣ ಭೈರೇಗೌಡರು ಚರ್ಚಿಸಿ ನನ್ನ ಗ್ರಾಮದಿಂದಲೇ ಈ ಯೋಜನೆ ಆರಂಭಿಸಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಲಿದೆ” ಎಂದರು.
“ನಮ್ಮ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿವೆ. ಅದರಲ್ಲಿ 2 ಗ್ರಾಮ ಅರಣ್ಯ ಭಾಗದಲ್ಲಿದೆ. ಉಳಿದ 33 ಗ್ರಾಮಗಳಲ್ಲಿ 5,804 ಸರ್ವೆ ನಂಬರ್ ಗಳಿದ್ದವು. ಈಗ 23,469 ಸಾವಿರ ಸರ್ವೆ ನಂಬರ್ ಗಳಾಗಿವೆ. ಈಗ ಈ ಪಂಚಾಯ್ತಿಯಲ್ಲಿ ಮರು ಭೂ ಮಾಪನ ಮಾಡಲಾಗಿದ್ದು, ಮುಂದೆ ಇಡೀ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ” ಎಂದು ತಿಳಿಸಿದರು.
ತಿಂಗಳಿಗೊಮ್ಮೆ ಕ್ಷೇತ್ರದ ಹೋಬಳಿಗೆ ಭೇಟಿ:
“ನಾನು ಡಿಸಿಎಂ ಆದ ನಂತರ ನನ್ನ ಕ್ಷೇತ್ರದ ಜನರನ್ನು ಭೇಟಿ ಮಾಡುವುದು ಕಷ್ಟವಾಗಿದೆ. ಬಹಳ ಜನ ಬೆಂಗಳೂರಿಗೆ ಬಂದು ವಾಪಸ್ ಹೋಗುತ್ತಿದ್ದೀರಿ. ಸುರೇಶ್ ಅವರು ಎಂಟು ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು. ಹೀಗಾಗಿ ತಿಂಗಳಿಗೆ ಒಂದು ದಿನ ಹೋಬಳಿ ಮಟ್ಟದಲ್ಲಿ ನಾನೇ ಬಂದು ಜನರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ಸಾತನೂರು ಹೋಬಳಿ ನಂತರ ಉಯ್ಯಂಬಳ್ಳಿ ಹೋಬಳಿಗೆ ಬಂದಿದ್ದು, ಮುಂದೆ ಕಸಬಾ, ಕೋಡಂಬಳ್ಳಿ ಹೋಬಳಿಗೆ ಭೇಟಿ ನೀಡಲಿದ್ದೇನೆ” ಎಂದು ತಿಳಿಸಿದರು.
“ನಾನು ಶಾಸಕನಾದ ನಂತರ 8 ಸಾವಿರ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಜಮೀನು ಹಂಚಿದ್ದೇನೆ. ಈ ಕಾರ್ಯಕ್ರಮದ ಮಹತ್ವ ನಿಮಗೆ ಅರ್ಥವಾಗುವುದಿಲ್ಲ. ನೀವು ಬೆಂಗಳೂರು ಭಾಗದಲ್ಲಿ ಒಂದು ಎಕರೆ ಭೂಮಿಯ ಪೋಡಿ ಮಾಡಿಸಲು 3-5 ಲಕ್ಷ ಖರ್ಚು ಮಾಡಬೇಕಾಗಿದೆ. ಲಂಚ ನೀಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.
“ನಿಮ್ಮ ಜಮೀನಿನ ದಾಖಲೆಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ತಿದ್ದುಕೊಳ್ಳಲು ಒಂದು ತಿಂಗಳು ಕಾಲಾವಕಾಶವಿದೆ. ಪಹಣಿ ಹಾಗೂ ಭೂ ನಕ್ಷೆ ಒಂದೇ ದಾಖಲೆಯಲ್ಲಿ ಬರುತ್ತಿದೆ. ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ಮೂಲಕ 5 ರೂಪಾಯಿಗೆ ಗಣಕೀಕೃತ ಪಹಣಿ ನೀಡುವ ಭೂಮಿ ಯೋಜನೆ ಮಾಡಲಾಗಿತ್ತು. ಈಗ ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳ ಸರ್ವೆ ಮಾಡಿಸಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಆಮೂಲಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದೇನೆ” ಎಂದು ಹೇಳಿದರು.
ಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ, ನಿಮ್ಮ ಜಮೀನು ಮಾರಿಕೊಳ್ಳಬೇಡಿ:
“15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು? ಈಗ ಎಷ್ಟು ಆಗಿದೆ? ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ” ಎಂದು ತಿಳಿಸಿದರು.
“ಇದು ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದೆಹಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ ನವರು ವರದಿ ಕಳುಹಿಸುವುದು ಬಾಕಿ ಇದೆ. ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದೇನೆ. ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ” ಎಂದು ಮನವಿ ಮಾಡಿದರು.
“ನಾವು ಬೆಂಗಳೂರಿನವರು, ನಮ್ಮ ಈ ಗುರುತನ್ನು ನಾವು ಯಾಕೆ ಬಿಟ್ಟುಕೊಡಬೇಕು? ಭವಿಷ್ಯದಲ್ಲಿ ನಿಮ್ಮ ಜಮೀನಿನ ಬೆಲೆ ಏನಾಗುತ್ತದೆ ಎಂದು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರುಗಳು ತಮ್ಮ ಊರು ಬಿಟ್ಟು ಇಲ್ಲಿಗೆ ಬಂದು ಯಾಕೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.
ಚನ್ನಪಟ್ಟಣಕ್ಕೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇತ್ತು:
“ಬೆಂಗಳೂರು ಕನಕಪುರ ರಸ್ತೆ ಹಿಂದೆ ಹೇಗಿತ್ತು, ಈಗ ಹೇಗಿದೆ? ರಸ್ತೆ, ನೀರಾವರಿ, ಒಳಚರಂಡಿ, ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ನೀವು ಪಕ್ಕದ ಮದ್ದೂರು, ಮಳವಳ್ಳಿ, ಚನ್ನಪಟ್ಟಣಕ್ಕೆ ಹೋಗಿ ನೋಡಿ, ಪರಿಸ್ಥಿತಿ ಗೊತ್ತಾಗುತ್ತದೆ. ಕುಮಾರಸ್ವಾಮಿ ಚನ್ನಪಟ್ಟಣದಿಂದ ಎರಡು ಬಾರಿ ಸಿಎಂ, ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ನಾನು ಅಲ್ಲಿಗೆ ಹೋದಾಗ ಮೂಗು ಮುಚ್ಚಿಕೊಂಡು ಹೋಗಬೇಕಾಯಿತು. ಈಗ ಸಿದ್ದರಾಮಯ್ಯ ಅವರಿಗೆ ಹೇಳಿ, ಸುಮಾರು 700-800 ಕೋಟಿ ಅನುದಾನವನ್ನು ಆ ಕ್ಷೇತ್ರಕ್ಕೆ ನೀಡಲಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ನಾಚಿಕೆಯಾಯಿತು. ಅಲ್ಲಿನ ಜನರಿಗೆ ಒಂದು ಮನೆ, ನಿವೇಶನ ನೀಡಿಲ್ಲ. ನಾನು ಸುಮಾರು 200 ಎಕರೆ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಸೂಚಿಸಿದ್ದೇನೆ. ಇದೆಲ್ಲವನ್ನು ಅರಿತ ಜನ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ” ಎಂದರು.
ಕುಮಾರಸ್ವಾಮಿ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?
“ಈ ಕ್ಷೇತ್ರದಲ್ಲಿ ಸೋಲಾರ್ ಪ್ಲಾಂಟ್ ತಂದಿದ್ದೇನೆ. ಅದರ ಪಕ್ಕದಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಜಮೀನು ನೀಡಿದ್ದೇನೆ, ನಮ್ಮ ಅಜ್ಜಿ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದೇನೆ. ಕುಮಾರಸ್ವಾಮಿ ಅಥವಾ ಸಂಸದ ಮಂಜುನಾಥ್ ಅವರು ರಾಜ್ಯದಲ್ಲಿ ಯಾರಿಗಾದರೂ ಒಂದು ಎಕರೆ ದಾನ ಮಾಡಿದ್ದಾರಾ?” ಎಂದು ಪ್ರಶ್ನಿಸಿದರು.
“ನೀವು ನನ್ನನ್ನು ಬೆಳೆಸಿದ್ದೀರಿ, ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಾಡಿದ್ದೀರಿ, ಸುರೇಶ್ ಅವರನ್ನು ಸಂಸದರನ್ನಾಗಿ ಮಾಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಋಣ ತೀರಿಸಲು ನಾನು ಈ ಕೆಲಸ ಮಾಡಿದ್ದೇನೆ. ನಮ್ಮ ಜತೆಯಲ್ಲಿದ್ದುಕೊಂಡು ತಟ್ಟೆಮರೆ ಏಟು ಕೊಟ್ಟವರಿಗೆ ನೀವು ಈ ವಿಚಾರ ತಿಳಿಸಿ, ಮುಂದೆ ನೀವು ಆತ್ಮಸಾಕ್ಷಿಗೆ ಮತ ಹಾಕುವಂತೆ ಹೇಳಬೇಕು” ಎಂದು ತಿಳಿಸಿದರು.
ಕನಕಪುರ ರಾಜ್ಯಕ್ಕೆ ಮಾದರಿ:
“ಡಿ.ಕೆ. ಸುರೇಶ್ ಸಂಸದರಾದ ನಂತರ ಇಡೀ ದೇಶದಲ್ಲಿ ನರೇಗಾ ಯೋಜನೆ ಅತಿಹೆಚ್ಚು ಅನುದಾನವನ್ನು ಬಳಸಿಕೊಂಡಿದ್ದೆವು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 3-5 ಕೋಟಿಯಂತೆ ಸುಮಾರು 200-300 ಕೋಟಿ ಅನುದಾನ ಬಳಸಿಕೊಳ್ಳಲಾಗಿತ್ತು. ಈ ಯಶಸ್ಸಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಬೇಕಿತ್ತು. ಕ್ಷೇತ್ರದ ಶಾಸಕನಾದ ನನಗೆ ಪ್ರಶಸ್ತಿ ನೀಡಬೇಕು ಎಂಬ ಕಾರಣಕ್ಕೆ ಹಿಂದೆ ಮುಂದೆ ನೋಡಿದರು. ಇಷ್ಟು ಅನುದಾನ ಬಳಕೆ ನೋಡಿ ನಮ್ಮ ಮೇಲೆ ಅನುಮಾನ ಪಟ್ಟು ಕೇಂದ್ರದಿಂದ ಅಧಿಕಾರಿಗಳನ್ನು ಕಳುಹಿಸಿ ತನಿಖೆ ಮಾಡಿಸಿದರು. ನಂತರ ಪಂಚಾಯ್ತಿ ಅಧ್ಯಕ್ಷರಾದ ವೈ.ಡಿ ಭೈರೇಗೌಡರನ್ನು ಕಳುಹಿಸಿ ಪ್ರಶಸ್ತಿ ಪಡೆಯುವಂತೆ ಹೇಳಿದೆ. ಇದು ಕನಕಪುರದ ಸಾಧನೆ” ಎಂದು ತಿಳಿಸಿದರು.
“ಸುರೇಶ್ ಅವರು ಸಂಸದರಾಗಿದ್ದಾಗ ಅವರ ಕ್ಷೇತ್ರದಲ್ಲಿ ಹೆಚ್ಚು ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನಮ್ಮ ತಾಲೂಕಿನಲ್ಲಿ 120ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಭಾಗದ ಜನರಲ್ಲಿ ಹೆಚ್ಚು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದಾಗ ಇದನ್ನು ತಪ್ಪಿಸಲು ಈ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆವು” ಎಂದರು.
“ನಾನು ಇಂಧನ ಸಚಿವನಾಗಿದ್ದಾಗ ಸುರೇಶ್ ಸಂಸದರಾಗಿದ್ದಾಗ ಈ ಭಾಗದ ಪ್ರತಿ ಇಬ್ಬರು ರೈತರಿಗೆ ಪ್ರತ್ಯೇಕವಾಗಿ ಟ್ರಾನ್ಸ್ ಫಾರ್ಮ್ ಅಳವಡಿಸಿದ್ದೆವು. ಈ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಇಂತಹ ಯೋಜನೆ ಮಾಡಲಾಗಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಲ್ಲಿ ಎಲ್ಲಿಯೂ ಇಂತಹ ಯೋಜನೆ ಮಾಡಿಲ್ಲ” ಎಂದು ಹೇಳಿದರು.
ಮೆಡಿಕಲ್ ಕಾಲೇಜು ಆರಂಭಿಸುವುದು ಗೊತ್ತಿದೆ:
ರಾಮನಗರ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ನಡೆಯುತ್ತಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ತರುವಾಗ ನಮ್ಮ ಕಾಲೇಜು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗಲಾಟೆ ಮಾಡಿದರು. ಹೀಗಾಗಿ ನಿಮ್ಮ ಕಾಲೇಜು ಅಲ್ಲೇ ನಡೆಯಲಿ ಎಂದು ಬಿಟ್ಟೆ. ಕನಕಪುರದಲ್ಲಿ ಯಾವಾಗ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ನನಗೆ ಗೊತ್ತಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಘೋಷಣೆಯಾಗಿದ್ದ ಕಾಲೇಜನ್ನು ತಪ್ಪಿಸಿದರು. ಇದೊಂದು ಕೆಲಸ ಬಾಕಿ ಇದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯೋಜನೆ ಹಾಕಿಕೊಳ್ಳುತ್ತೇವೆ.
ಲೋಕಸಭೆ ಚುನಾವಣೆ ಫಲಿತಾಂಶ ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ:
“ಸಂಸತ್ ಚುನಾವಣೆ ಫಲಿತಾಂಶ ಈ ರೀತಿ ಯಾಕೆ ಆಯಿತು ಎಂದು ನಾನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ. ಬೇರೆಯವರಿಗೆ ಮತ ಹಾಕಿ ಗೆಲ್ಲಿಸಿದ್ದೀರಿ. ನನ್ನ ಕ್ಷೇತ್ರದಲ್ಲೂ ತಟ್ಟೆಮರೆ ಏಟು ಬಿದ್ದಿದೆ. ಹೊಸದಾಗಿ ಬಂದಿರುವ ಸಂಸದರು ದಿನಬೆಳಗಾದರೆ ನಿಮಗೆ ಸೇವೆ ಮಾಡುತ್ತಿರಬೇಕಲ್ಲವೇ. ಬಹಳ ಸಂತೋಷ, ಅವರಿಗೆ ಮತ ಹಾಕಿರುವವರು ಸಂತೋಷವಾಗಿರಲಿ” ಎಂದರು.
“ನೀವು ದಳಕ್ಕೆ ಮತ ಹಾಕಿದರೂ, ಬಿಜೆಪಿಗೆ ಮತ ಹಾಕಿದರೂ ಎಲ್ಲರಿಗೂ ಅನುಕೂಲವಾಗುವಂತೆ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ನಿಮ್ಮ ಆತ್ಮಸಾಕ್ಷಿಗೆ ಅರ್ಥವಾದರೆ ಸಾಕು” ಎಂದರು.
“ಸಂಸತ್ ಚುನಾವಣೆ ಬಳಿಕ ವಿಧಾನಸಭೆ ಚುನಾವಣೆಗೆ ಸಿದ್ಧವಾಗಲು ಅನೇಕ ಗಂಡುಗಳು ಸಿದ್ಧರಾಗಿದ್ದರು. ನಂತರ ಚನ್ನಪಟ್ಟಣ ಚುನಾವಣೆ ಬಂತು. ನಾನು ಸಂಸತ್ ಚುನಾವಣೆ ಮುಗಿದ ಬಳಿಕ ಇಡೀ ಸರ್ಕಾರವನ್ನು ಆ ಕ್ಷೇತ್ರ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದೆ. ಅವರ ಮನೆಗೆ ಅರ್ಜಿ ತಲುಪಿಸಿ ಅವರ ಅಹವಾಲು ಕೇಳಿದೆ. ಸುಮಾರು 26 ಸಾವಿರ ಜನ ನಮಗೆ ಅರ್ಜಿ ಹಾಕಿದರು” ಎಂದರು.
ರೇಷ್ಮೆ, ಹೈನುಗಾರಿಕೆ ಬಿಡಬೇಡಿ:
“ಇನ್ನು ಈ ಭಾಗದಲ್ಲಿ 2500 ಎಕರೆಗೆ ಹನಿ ನೀರಾವರಿ ಯೋಜನೆ ಮಂಜೂರಾಗಿದೆ. ನಮ್ಮ ತಾಲೂಕು ರೇಷ್ಮೆಗೆ ಹೆಸರಾಗಿದ್ದು, ರೇಷ್ಮೆಗೆ ಅತ್ಯುತ್ತಮ ಬೆಲೆ ಇದೆ. ನಮ್ಮನ್ನು ನೋಡಿ ಬೇರೆ ಜಿಲ್ಲೆಗಳಲ್ಲೂ ರೇಷ್ಮೆ ಬೆಳೆಯಲಾಗುತ್ತಿದೆ. ನೀವೆಲ್ಲರೂ ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಈಗ ಇಲ್ಲಿ ದೊಡ್ಡ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುತ್ತಿದ್ದೇವೆ. ನೀವುಗಳು ರೇಷ್ಮೆ ಬೆಳೆಯುವುದನ್ನು ನಿಲ್ಲಿಸಬೇಡಿ. ಇದೇ ರೀತಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಅವಕಾಶವಿದೆ. ದೇಶದಲ್ಲಿ ಅಮೂಲ್ ಡೈರಿ ನಂತರ ಅತ್ಯುತ್ತಮ ತಂತ್ರಜ್ಞಾನ ಇರುವ ಡೈರಿ ನಮ್ಮ ಕನಕಪುರದಲ್ಲಿದೆ ಎಂಬುದನ್ನು ನೀವು ಮರೆಯುವಂತಿಲ್ಲ” ಎಂದರು.
“ಈಗ ಕನಕಪುರದ ಕರಿಯಪ್ಪ ಕಾಲೇಜಿನಲ್ಲಿ ಕೃಷಿ ಕಾಲೇಜು ಆರಂಭಿಸಿದ್ದೇನೆ. ಹಾರೋಹಳ್ಳಿ ಬಳಿ 50 ಏಕರೆಯಷ್ಟು ಗಾಂಧಿ ಫಾರಂ ಎಂದು ಮಾಡಿದ್ದರು. ಈಗ ಅದನ್ನು ಕೃಷಿ ಕಾಲೇಜು ಮಾಡಿಸಿದ್ದೇನೆ. ಕಾವೇರಿ ನದಿಯ ಸಂಗಮದಿಂದ 21 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಲಾಗಿದ್ದು, ಟೆಂಡರ್ ಗೆ ಅನುಮತಿಯೂ ನೀಡಲಾಗಿದೆ. ನನ್ನ ಇಲಾಖೆಯಲ್ಲೇ 108 ಕೋಟಿ ವೆಚ್ಚದಲ್ಲಿ ಈ ಯೋಜನೆ ಮಾಡಲಾಗುವುದು” ಎಂದು ಹೇಳಿದರು.
ವಲಸೆ ತಪ್ಪಿಸಲು ಕ್ರಮ:
“ನಿಮ್ಮ ಸಮಸ್ಯೆ ಏನೇ ಇದ್ದರೂ ನಮಗೆ ಹೇಳಿ, ನಾವು ನಿಮ್ಮ ಜತೆ ಇದ್ದೇವೆ. ಬಡವರ ಮನೆ ನೀಡುವ ಆಲೋಚನೆ ಮಾಡುತ್ತಿದ್ದೇವೆ. ಈ ಕ್ಷೇತ್ರದ ಸುಮಾರು 40 ಸಾವಿರ ಜನರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕನಕಪುರದಲ್ಲಿ ಕೈಗಾರಿಕೆಗೆ ಅವಕಾಶ ನೀಡಲು ಜಾಗ ಗುರುತಿಸಲಾಗುತ್ತದೆ” ಎಂದು ತಿಳಿಸಿದರು.
“ಈ ಕ್ಷೇತ್ರದಲ್ಲಿ ಉತ್ತಮ ಅಧಿಕಾರಿಗಳು ಇದ್ದಾರೆ ಯಾರೂ ನಿಮಗೆ ಲಂಚ ಕೇಳುವುದಿಲ್ಲ. ಪಂಚಾಯ್ತಿ ಮಟ್ಟದಲ್ಲಿ ಕೆಲವರು ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರ ಪಟ್ಟಿಯನ್ನು ತರಿಸಿಕೊಳ್ಳುತ್ತೇನೆ. ಇನ್ನು ಈ ಕ್ಷೇತ್ರದಲ್ಲಿ ಇಸ್ಪೀಟ್ ಜೂಜಿಗೆ ಅವಕಾಶ ನೀಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರಣ ಈ ಕ್ಷೇತ್ರದಲ್ಲಿ ಏನೇ ಆದರೂ ಡಿ.ಕೆ. ಶಿವಕುಮಾರ್ ಕ್ಷೇತ್ರ ಎಂದು ಬರೆದು ದೊಡ್ಡದು ಮಾಡುತ್ತಾರೆ.
ಈ ಸಂದರ್ಭದಲ್ಲಿ ನಮ್ಮ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದ ವೇಳೆ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಡಾನೆ ಹಾವಳಿಯಿಂದ ಮುಕ್ತಿ ಬೇಕು ಎಂಬ ಬೇಡಿಕೆ ಇರುವ ಬಗ್ಗೆ ಕೇಳಿದಾಗ, “ಕಾಡಾನೆ ಹಾವಳಿ ಇರುವುದು ನಿಜ. ಬನ್ನೇರುಘಟ್ಟದಿಂದ ಸಂಗಮ, ಮೇಕೆದಾಟು ಸೇರಿ ತಮಿಳುನಾಡಿನ ಗಡಿ ಭಾಗದಲ್ಲಿ ಆನೆಗಳ ಸಂಚಾರ ಹೆಚ್ಚಾಗಿದೆ. ನಮ್ಮ ಮನೆ ಸಮೀಪದಲ್ಲೇ 50 ಆನೆಗಳ ಹಿಂಡು ಸಾಗುತ್ತಿರುವ ವಿಡಿಯೋ ಕೂಡ ಬಂದಿದ್ದವು. ಈ ಪರಿಸ್ಥಿತಿಯಲ್ಲಿ ಎಷ್ಟು ನಿಯಂತ್ರಿಸಲು ಸಾಧ್ಯವೋ ನಿಯಂತ್ರಣ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯಿಂದ ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಕಡೆ ತಡೆಗೋಡೆ ನಿರ್ಮಿಸಲು, ಗುಂಡಿ ತೊಡಲು ವ್ಯವಸ್ಥೆ ಮಾಡಲಾಗುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಸಮಾಯದಲ್ಲೂ ಈ ಬೇಡಿಕೆ ಹೆಚ್ಚಾಗಿತ್ತು” ಎಂದು ಉತ್ತರಿಸಿದರು.
ಡಿನ್ನರ್ ಸಭೆ ಬಗ್ಗೆ ಕೇಳಿದಾಗ, “ಯಾವ ಡಿನ್ನರ್ ಇಲ್ಲ. ಹೊಸವರ್ಷಾಚರಣೆಗೆ ನಮ್ಮ ಕೆಲ ನಾಯಕರು ಸೇರಿದರು. ಇದಕ್ಕೆ ಯಾರೋ ಸುದ್ದಿ ಕಟ್ಟಿದ್ದಾರೆ ಅಷ್ಟೇ. ನಾವು ಹೊಸವರ್ಷಕ್ಕೆ ಹೊರ ದೇಶಕ್ಕೆ ಹೋಗಿದ್ದೆವು. ಇಲ್ಲಿ ನಮ್ಮ ನಾಯಕರು ಊಟಕ್ಕೆ ಸೇರಿದರು. ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗಿದೆ” ಎಂದರು.
ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು. ಈ ವಿಚಾರವಾಗಿ ಮೂಖ್ಯಮಂತ್ರಿಗಳು ಮಾಹಿತಿ ನೀಡುತ್ತಾರೆ” ಎಂದು ತಿಳಿಸಿದರು.
ರಾಮನಗರದ ಭಾಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸಿಗುವುದೇ ಎಂದು ಕೇಳಿದಾಗ, “ನಾನು ಇದ್ದೇನಲ್ಲಾ. ಈ ಬಗ್ಗೆ ಸಿಎಂ ಅವರನ್ನು ಕೇಳಿ” ಎಂದರು.
ಶಿವಮೊಗ್ಗ: ಉಳ್ಳೂರು ಸಹಕಾರ ಸಂಘದ ಅಧ್ಯಕ್ಷರಾಗಿ ತಿರುಮಲೇಶ್, ಉಪಾಧ್ಯಕ್ಷರಾಗಿ ರಾಮಚಂದ್ರ ಆಯ್ಕೆ
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!