ಶಿವಮೊಗ್ಗ: ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ತರಾತುರಿಯಲ್ಲಿ ಮುಕ್ತಾಯಗೊಳಿಸಿರೋದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಇಓ, ಸಿಇಓಗೂ ದೂರು ನೀಡಲಾಗಿದೆ. ಆ ವೇಳೆಯಲ್ಲಿ ಟೆಂಡರ್ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚಿಸಿದ್ದರೂ, ಡೋಂಟ್ ಕೇರ್ ಎಂಬುದಾಗಿ ಪಿಡಿಓ ವರ್ತಿಸಿದಂತ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರ ಅಮಾನತು ಕೂಡ ಆಗಲಿದೆ ಎನ್ನಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಿಇಓ, ಇಓಗೆ ದೂರು
ದಿನಾಂಕ 23-01-2026ರಂದು ಮಧುಸೂಧನ ಹಾಗೂ ತಾಳಗುಪ್ಪ ಗ್ರಾಮಸ್ಥರು ಸೇರಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಅವಧಿ ಪೂರ್ಣ ಹರಾಜು ಪ್ರಕ್ರಿಯೆ ಕರೆದಿರುವ ಬಗ್ಗೆ, ಜಮಾಬಂಧಿ ಮಾಡದಿರುವ ಬಗ್ಗೆ ದೂರು ನೀಡಿದ್ದರು. ಇದೇ ದೂರಿನ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಾಗರ ತಾಲ್ಲೂಕು ಪಂಚಾಯ್ತಿ ಇಓಗೂ ಇ-ಮೇಲ್ ಮೂಲಕ ಸಲ್ಲಿಸಿದ್ದರು.
ಅವರು ಸಲ್ಲಿಸಿರುವಂತ ದೂರಿನಲ್ಲಿ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿನಾಂಕ 01-04-2025ರಿಂದ 31-03-2026ರವರೆಗೆ 2025-26ನೇ ಸಾಲಿನ ಸಂತೆ ಸುಂಕದ ಹರಾಜು, ಹಸಿ ಮೀನು ಮಾರಾಟ, ಒಣ ಮೀನು, ಬೀದಿ ದೀಪ ಇವುಗಳ ಹರಾಜನ್ನು ದಿನಾಂಕ 27-01-2026ರಂದು ನಡೆಸಲಾಗುತ್ತಿದೆ. ಇದು ಗ್ರಾಮ ಪಂಚಾಯ್ತಿ ನಿಯಮ ಉಲ್ಲಂಘಿಸಿ 45 ದಿನಗಳ ಮುಂಚಿತವಾಗಿ ಹರಾಜು ಪ್ರಕ್ರಿಯೆಯಾಗಿದೆ. ಇದು ಕಾನೂನು ಬಾಹಿರವಾದಂತದ್ದು. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು.
ಇದಷ್ಟೇ ಅಲ್ಲದೇ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಕಳೆದ 2-3 ವರ್ಷಗಳಿಂದ ಜಮಾ ಬಂದಿ ಮಾಡಿರೋದಿಲ್ಲ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದಂತ ತಾವುಗಳು ತುರ್ತಾಗಿ ಜಮಾ ಬಂದಿ ಮಾಡಿಸಲು ಸೂಚಿಸಬೇಕು. ಕಾನೂನು ಬಾಹಿರ ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ವಿನಂತಿಸಲಾಗಿತ್ತು.
ಮುಂದೂಡಿಕೆಗೆ ಸಚಿವ ಮಧು ಬಂಗಾರಪ್ಪ ಖಡಕ್ ಸೂಚನೆ
ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರೆ ಟೆಂಡರ್ ಪ್ರಕ್ರಿಯೆ ಹರಾಜು ಬಗ್ಗೆ ತಾಳಗುಪ್ಪ ಗ್ರಾಮಸ್ಥ ಮಧುಸೂಧನ್ ಸಲ್ಲಿಸಿದ್ದಂತ ಮನವಿ, ದೂರನ್ನು ಆಧರಿಸಿ ಸಚಿವ ಮಧು ಬಂಗಾರಪ್ಪ ಅವರು ಟೆಂಡರ್ ಮುಂದೂಡಿಕೆಗೆ ಖಡಕ್ ಸೂಚನೆ ನೀಡಿದ್ದರು ಎನ್ನಲಾಗಿದೆ. ಅವಧಿ ಪೂರ್ವವಾಗಿ ಎರಡು ತಿಂಗಳ ಮೊದಲೇ ವಾಣಿಜ್ಯ ಮಳಿಗೆಗಳ ಹರಾಜಿನ ತರಾತುರಿ ಏಕೆ? ಇನ್ನೂ ಸಮಯಾವಕಾಶ ಇದೆ. ಅಲ್ಲಿಯವರೆಗೆ ಸದ್ಯಕ್ಕೆ ಟೆಂಡರ್ ಮುಂದೂಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎನ್ನಲಾಗುತ್ತಿದೆ.
ಸಚಿವರ ಸೂಚನೆಗೂ ಡೋಂಟ್ ಕೇಸ್
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯನ್ನೂ ಲೆಕ್ಕಿಸದೇ ತಾಲ್ಲೂಕು ಗ್ರಾಮ ಪಂಚಾಯ್ತಿ ಪಿಡಿಓ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು, ದಿನಾಂಕ 27-01-2026ರಂದು ಟೆಂಡರ್ ಮುಕ್ತಾಯಗೊಳಿಸಿದ್ದಾರೆ. ಆ ಮೂಲಕ ಎರಡು ತಿಂಗಳ ಮೊದಲೇ ವಾಣಿಜ್ಯ ಮಳಿಗೆಗಳನ್ನು ಹರಾಜು ಮುಗಿಸಿದ್ದು, ಈಗ ಸಚಿವರ ಕೆಂಗಣ್ಣಿಗೂ ಗುರಿಯಾದಂತೆ ಆಗಿದೆ. ಹೀಗಾಗಿ ತಾಳಗುಪ್ಪ ಗ್ರಾಮ ಪಂಚಾಯ್ತಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸಚಿವರು ಗರಂ ಆಗಿದ್ದಾರೆ ಎನ್ನಲಾಗಿದೆ.
ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಟೆಂಡರ್
ಅಂದಹಾಗೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿನಿಯಮಗಳ ಅನುಸಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೂ ಮುನ್ನ, ಸಂಬಂಧ ಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಆದರೇ ಇಲ್ಲಿ ಅದ್ಯಾವ ನಿಯಮವನ್ನು ಪಾಲಿಸಿಲ್ಲ. ತರಾತುರಿಯಲ್ಲಿ ತಾಲ್ಲೂಕು ಆಡಳಿತದಿಂದ ಹರಾಜು ಪ್ರಕ್ರಿಯೆಗೆ ಅನುಮತಿ ಪಡೆಯದೇ, ತಾಳಗುಪ್ಪ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರೆ ಟೆಂಡರ್ ಹರಾಜು ಮುಗಿಸಿದ್ದು ಬಿಲ್ ಖುಲ್ ಕಾನೂನಿನ ವಿರುದ್ಧ ನಡೆ ಎಂಬುದು ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ತಾಳಗುಪ್ಪ ಗ್ರಾಮ ಪಂಚಾಯ್ತಿ ಪಿಡಿಓ ಅಮಾನತು ಸಾಧ್ಯತೆ
ತಾಳಗುಪ್ಪ ಗ್ರಾಮ ಪಂಚಾಯ್ತಿಯ ವಾಣಿಜ್ಯ ಮಳಿಗೆ ಟೆಂಡರ್ ಪ್ರಕ್ರಿಯೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿ, ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಸಿಇಓ, ತಾಲ್ಲೂಕು ಪಂಚಾಯ್ತಿ ಇಓಗೆ ಗ್ರಾಮಸ್ಥರು ದೂರು ಸಲ್ಲಿಕೆಯಾಗಿದ್ದರೂ, ಸೂಕ್ತ ರೀತಿಯಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಟೆಂಡರ್ ಪ್ರಕ್ರಿಯೆಯನ್ನು ಪಿಡಿಓ ಮುಗಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೊಂದು ಕಾನೂನು ಬಾಹಿರವಾದಂತ ಟೆಂಡರ್ ಪ್ರಕ್ರಿಯೆಯಾಗಿದೆ. ಇದನ್ನು ತಡೆಯೋದಕ್ಕೆ ವಿಫಲ ಕೂಡ ಪಿಡಿಓ ಆಗಿದ್ದಾರೆ. ಕಾನೂನು ಪಾಲಿಸಬೇಕಾದಂತ ಅಧಿಕಾರಿಯೇ ಕಾನೂನು ಮೀರಿ ಕೆಲಸ ಮಾಡಿದ್ದಾರೆ ಎಂಬ ಆರೋಪಗಳು ಪಿಡಿಓ ವಿರುದ್ಧ ಕೇಳಿ ಬಂದಿವೆ.
ಈ ಎಲ್ಲಾ ಕಾರಣದಿಂದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಸಂಬಂಧ ತನಿಖೆ ನಡೆಸುವ ಸಾಧ್ಯತೆ ಇದೆ. ತನಿಖಾ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಕೆಯ ಬಳಿಕ, ಕಾನೂನು ಕ್ರಮದ ಭಾಗವಾಗಿ ತಾಳಗುಪ್ಪ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತುಗೊಳಿಸೋ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ.
ಟೆಂಡರ್ ರದ್ದುಗೊಳಿಸುವಂತೆ ತಾಳಗುಪ್ಪ ಗ್ರಾಮಸ್ಥ ಮಧುಸೂಧನ ಹಾಗೂ ಗ್ರಾಮಸ್ಥರು ಒತ್ತಾಯ
ತಾಳಗುಪ್ಪ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳ ಅಧಿಕಾರ ಅವಧಿ ಶೀಘ್ರವೇ ಅಂತ್ಯಗೊಳ್ಳಲಿದೆ. ಈ ಕಾರಣಕ್ಕೆ ತಮ್ಮ ಅಧಿಕಾರವಧಿಯಲ್ಲೇ ಟೆಂಡರ್ ಮುಗಿಸೋ ತರಾತುರಿಯಲ್ಲಿ ಕೆಲ ಕಾನೂನು ನಿಯಮಗಳನ್ನು ಮೀರಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಮುಗಿಸಲಾಗಿದೆ. ಇದೊಂದು ಕಾನೂನು ಬಾಹಿರ ಪ್ರಕ್ರಿಯೆಯಾಗಿದೆ. ಈಗಾಗಲೇ ಸಚಿವ ಮಧು ಬಂಗಾರಪ್ಪ ಅವರಿಗೆ, ಸಿಇಓ, ಇಓಗೆ ದೂರು ನೀಡಲಾಗಿದೆ. ಈ ಕೂಡಲೇ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಹರಾಜು ಆಗಿರುವುದನ್ನು ರದ್ದುಗೊಳಿಸಬೇಕು. ಮರು ಟೆಂಡರ್ ಅನ್ನು ಕಾನೂನು ವ್ಯಾಪ್ತಿಯಲ್ಲೇ ನಡೆಸಬೇಕು ಎಂಬುದಾಗಿ ಮಧುಸೂಧನ ಹಾಗೂ ತಾಳಗುಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು









