ಬೆಂಗಳೂರು: ನಗರದಿಂದ ಹೊರಹೋಗಿ, ಪ್ರಕೃತಿಯ ಮಡಿಲಿನಲ್ಲಿ ಒಂದು ದಿನ ಪ್ರವಾಸಕ್ಕೆ ತೆರಳುವಂತ ಯೋಚನೆಯಲ್ಲಿದ್ದವರಿಗೆ, ಕೆ ಎಸ್ ಆರ್ ಟಿ ಸಿಯಿಂದ ಸುವರ್ಣಾವಕಾಶವನ್ನು ಒದಗಿಸಿದೆ. ಒಂದು ದಿನದ ಮಟ್ಟಿಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಯ ಪ್ರಸಿದ್ಧ ಸ್ಥಳಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಸೌಲಭ್ಯ ಘೋಷಿಸಿದೆ.
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರಕೃತಿಯ ಮಡಿಲಲ್ಲಿ ಒಂದು ದಿನದ ಪ್ರವಾಸಕ್ಕೆ ನಾನ್ ಎಸಿ, ಸ್ಲೀಪರ್ ಸಾರಿಗೆಯೊಂದಿಗೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಪ್ಯಾಕೇಜ್ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡಲಿದ್ದು, ಮಲೆನಾಡಿನ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗದ ಜಲಪಾತ ನೋಡಿಕೊಂಡು ಬರಬಹುದು ಎಂದು ತಿಳಿಸಿದೆ.
ಇನ್ನೂ ಶಿವಮೊಗ್ಗದ ಪ್ರವಾಸಿ ತಾಣಗಳಲ್ಲದೇ, ಒಂದು ದಿನ ಪ್ರವಾಸಕ್ಕೆ ವೇಗದೂತ ಸಾರಿಗೆಯೊಂದಿಗೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಬೆಂಗಳೂರಿನಿಂದ ಬೆಳಿಗ್ಗೆ 6.30ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟು, ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನಚುಕ್ಕಿ, ಭರಚುಕ್ಕಿ ಫಾಲ್ಸ್ ನೋಡಿಕೊಂಡು ವಾಪಾಸ್ ಬರಲು ವಿಶೇಷ ಟೂರ್ ಸೌಲಭ್ಯ ಮಾಡಿದೆ.
ಪ್ರವಾಸಿಗರು ಈ ಪ್ರವಾಸಿ ತಾಣಗಳಿಗೆ ಹೋಗಿ ಬರೋದಕ್ಕೆ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ನಿಗಮದ ಮುಂಗಡ ಟಿಕೇಟ್ ಬುಕ್ಕಿಂಗ್ ಕೌಂಟರ್ ಗಳಲ್ಲಿ ಬುಕ್ಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 080-26252625, 7760990100, 7760990560, 7760990287 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.