ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಉಳಿಸಲು ಈಗಾಗಲೇ ಹಲವರು ಸಾವಿರಾರು ಕೋಟಿ ರೂಪಾಯಿ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕವಾದ ಹೇಳಿಕೆ ನೀಡಿದ್ದರು. ಯತ್ನಾಳ್ ಹೇಳಿಕೆಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ಹೇಳಿಕೆ ಕುರಿತಾಗಿ ಐಟಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಮಾಹಿತಿಯನ್ನು ತಿಳಿಸಿದ್ದೇನೆ. ಇದು ತೆರಿಗೆ ಇಲಾಖೆ (IT) ಹಾಗೂ ಇಡಿ (ED) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ ಮಾಡಲಿದ್ದೇನೆ ಎಂದರು.
ಯತ್ನಾಳ್ ಹೇಳಿದ್ದೇನು?
ಇತ್ತೀಚೆಗೆ ದಾವಣಗೆರೆಯಲ್ಲಿ ಬಿಜೆಪಿ ಬಂಡಾಯ ನಾಯಕರ ಗುಪ್ತಸಭೆ ನಡೆದಿತ್ತು. ಈ ಒಂದು ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯ ಸರ್ಕಾರವನ್ನು ಪತನಗೊಳಿಸಲು ಷಡ್ಯಂತ್ರ ನಡೆಸಲಾಗಿದೆ. ಅದಕ್ಕಾಗಿ 1,200 ಕೋಟಿ ರೂ. ರೆಡಿ ಮಾಡಿ ಇಡಲಾಗಿದೆ. ಈ ಷಡ್ಯಂತ್ರದ ಭಾಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ಇದ್ದಾರೆ.
ಬಿಜೆಪಿ ಹೈಕಮಾಂಡ್‌ಗೆ ಆಸಕ್ತಿಯಿಲ್ಲದಿದ್ದರೂ ಬಿಜೆಪಿಯೊಳಗಿನ ಕೆಲವು ಮಂದಿ ಆಪರೇಷನ್ ಕಮಲದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಸಂಚಿನ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ನಾವು ಅದಕ್ಕೆ ಆಸ್ಪದ ನೀಡುವುದಿಲ್ಲ.ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸರ್ಕಾರವನ್ನು ಬೀಳಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದನ್ನು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ. ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರೇ ನಮಗೆ ದಾಖಲೆಗಳನ್ನು ನೀಡಿದ್ದರು. ನಿಜಕ್ಕಾದರೆ ಈ ಹೋರಾಟಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.