ಬೆಂಗಳೂರು: ನಿರ್ಮಲಾ ಸೀತರಾಮನ್ ಅವರು 60 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದಿದ್ದಾರೆ. ನಮ್ಮ ರೈತರು, ಕಾರ್ಮಿಕರ ಬದುಕಿಗೂ ನ್ಯಾಯ ಒದಗಿಸಿಕೊಡಬೇಕು. ಬೆಲೆ ಏರಿಕೆ ವಿರುದ್ಧ, ಮಹಿಳೆಯರ ಸಬಲೀಕರಣ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ವಿಚಾರ ಇಟ್ಟುಕೊಂಡು ಯಾತ್ರೆ ಆಯೋಜಿಸುತ್ತಿದ್ದೇವೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯ ಯುವಕಾಂಗ್ರೆಸ್ ಇಂದು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ( Bharat Jodo Yatra ) ನಡೆಯುತ್ತಿದೆ. ಪಂಚ ವಿಚಾರ ಸಂಬಂಧ ಈ ಯಾತ್ರೆ ಆಯೋಜಿಸಲಾಗಿದೆ ಎಂದರು.
ದೇಶದಲ್ಲಿ ಸಾಮರಸ್ಯ ಸ್ಥಾಪಿಸಿ, ನಮ್ಮ ರಾಜ್ಯ ಹಾಗೂ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ವರ್ಷಕ್ಕೆ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನ ಮಂತ್ರಿಗಳು ಮಾತು ಕೊಟ್ಟಿದ್ದು, ನುಡಿದಿದಂತೆ ನಡೆದಿಲ್ಲ. ನಿರ್ಮಲಾ ಸೀತರಾಮನ್ ಅವರು 60 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದಿದ್ದಾರೆ. ನಮ್ಮ ರೈತರು, ಕಾರ್ಮಿಕರ ಬದುಕಿಗೂ ನ್ಯಾಯ ಒದಗಿಸಿಕೊಡಬೇಕು. ಬೆಲೆ ಏರಿಕೆ ವಿರುದ್ಧ, ಮಹಿಳೆಯರ ಸಬಲೀಕರಣ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ವಿಚಾರ ಇಟ್ಟುಕೊಂಡು ಯಾತ್ರೆ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ಕೇವಲ ಟೀಕೆ ಮಾಡದೇ, ಉದ್ಯೋಗ ಸೃಷ್ಟಿಗೆ ಅವರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದೇವೆ. ಇಡೀ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಯಾವುದೇ ಪಕ್ಷ, ವರ್ಗ, ಜಾತಿ, ಧರ್ಮ ಭೇದವಿಲ್ಲದೆ, ವಿದ್ಯಾರ್ಹತೆ ಆಧರಿಸಿ ಎಲ್ಲರಿಗೂ ನೋಂದಣಿ ಅವಕಾಶ ನೀಡುತ್ತಿದ್ದೇವೆ. ಈಗಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ 40 ಸಾವಿರ ನಿರುದ್ಯೋಗಿಗಳ ಹೆಸರು ನೋಂದಣಿ ಮಾಡಿಸಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಯಾತ್ರೆ ಮಾಡುವಾಗ ಎರಡು ಕಡೆಗಳಲ್ಲಿ ನಿರುದ್ಯೋಗಿ ಯುವಕರ ಜತೆ ಚರ್ಚೆಗೆ ಅವಕಾಶ ನೀಡುತ್ತಿದ್ದೇವೆ. ನೇಮಕಾತಿಯಲ್ಲಿನ ಭ್ರಷ್ಟಾಚಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕವಾಗಿ ನಾವೆಲ್ಲ ತಲೆತಗ್ಗಿಸುವಂತಾಗಿದೆ. ಎಲ್ಲ ಇಲಾಖೆಗಳ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಿದೆ. ಇತ್ತೀಚೆಗೆ ಯುವಕರು ಯಾವುದೇ ಪಕ್ಷದ ಕರೆ ಇಲ್ಲದೆ ತಾವಾಗಿಯೇ ಉದ್ಯೋಗಸೌಧದ ಮುಂದೆ ಪ್ರತಿಭಟನೆ ಮಾಡಿದ್ದನ್ನು ನಾವು ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯುವಕರ ಬದುಕಿನಲ್ಲಿ ಆಶಾಕಿರಣ ಮೂಡಿಸಿ, ಖಾಸಗಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಸರ್ಕಾರಿ ಉದ್ಯೋಗ ತುಂಬಬೇಕು ಎಂದು ಧ್ವನಿ ಎತ್ತಲು ಅವರು ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯುವಧ್ವನಿ ನಮ್ಮ ಧ್ವನಿಯಾಗಬೇಕು ಎಂದು ನಾವು ಇಂದು ಈ ವೆಬ್ ಸೈಟ್ ಉದ್ಘಾಟಿಸುತ್ತಿದ್ದೇವೆ. ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲು ಬಯಸುವವರು ನೋಂದಣಿ ಮಾಡಿಕೊಳ್ಳಬಹುದು. ರಾಹುಲ್ ಗಾಂಧಿ ಅವರ ಜತೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಭೇಟಿಗೆ ಅವಕಾಶ ನೀಡಲಾಗುವುದು. 21 ದಿನಗಳ ಯಾತ್ರೆಯಲ್ಲಿ ಪ್ರತಿನಿತ್ಯ ರೈತರು, ಮಹಿಳೆಯರು, ಪರಿಶಿಷ್ಟರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರಿಗೂ ರಾಹುಲ್ ಗಾಂಧಿ ಅವರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ನಡೆದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ 1.36 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 76 ಸಾವಿರ ಜನ ಯುವಕರಾಗಿದ್ದರು. ದೇಶದಲ್ಲಿ ಬದಲಾವಣೆ ತರಲು ಯುವಕರ ಉತ್ಸಾಹಕ್ಕೆ ಇದು ಸಾಕ್ಷಿ. ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ರೈತರು ರಾಜ್ಯದ ಎಲ್ಲ ಭಾಗಗಳಿಂದ ಆಗಮಿಸಿ ಹೆಜ್ಜೆ ಹಾಕಿದ್ದರು. ಬೆಂಗಳೂರು, ಕರ್ನಾಟಕ, ಯುವಕರು, ರೈತರು ಹಾಗೂ ಕೈಗಾರಿಕೆಗಳ ವಿಚಾರವಾಗಿ ನನಗೆ ದೂರದೃಷ್ಟಿ ಇದೆ. ನಿರುದ್ಯೋಗ ಸಮಸ್ಯೆಗೆ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮಗೆ ಜಾತಿ, ಧರ್ಮಕ್ಕಿಂತ ಯುವಕರ ಹಸಿವು ನೀಗಿಸುವುದು ಗುರಿಯಾಗಿದೆ ಎಂದರು.