ಉಡುಪಿ: ಸಚಿವೆ ಶೋಭಾ ಕರಂದ್ಲಾಜೆ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಸುದ್ದಿಗೆ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಶೋಭಾ ಕರಂದ್ಲಾಜೆ ಹೆಸರು ಬದಲಿಸುವ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳನ್ನ ಕೆಲವರು ಜೋಕರ್ಸ್ ಅಂದುಕೊಂಡಿದ್ದಾರೆ ಎಂದು ಗರಂ ಆದರು.
ಮಾಧ್ಯಮ, ಸಾಮಾಜಿಕ, ರಾಜಕೀಯ ವಲಯ ಅಥವಾ ವಿರೋಧ ಪಕ್ಷ ಅಪಪ್ರಚಾರ ನಿಲ್ಲಿಸಬೇಕು. ಈ ರೀತಿ ಮಾಡುವವರಿಗೆ ಇದು ನನ್ನ ವಿನಮ್ರ ವಿನಂತಿ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ ಒಂದು ವರ್ಗದ ಪ್ರಕಾರ 2023ರ ಚುನಾವಣೆಗೆ ತಯಾರಿ ನಡೆಸಲಾಗುತ್ತಿದ್ದು, ಶೋಭಾ ಕರಂದ್ಲಾಜೆ ಅವರು ಶೋಭಾ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.