ಕೊಪ್ಪಳ : ಹನುಮನ ಜನ್ಮಸ್ಥಳ ಅಂಜನಾದ್ರಿಯನ್ನ ದೇಶದ ಗಮನ ಸೆಳೆಯುವಂತೆ ಅಭಿವೃದ್ದಿಪಡಿಸಲಾಗುವುದು ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ( Minister Shashikala Jolle ) ಅವರು ಹೇಳಿದರು.
ಇಂದು ಕೊಪ್ಪಳ ಜಿಲ್ಲೆಯಲ್ಲಿ ಸ್ವಾತಂತ್ರೋತ್ಸವದ ಹಿನ್ನಲೆಯಲ್ಲಿ ಧ್ವಜಾರೋಹಣ ನಡೆಸಿದ ನಂತರ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಜನಾದ್ರಿ ಬೆಟ್ಟ ಶ್ರೀರಾಮನ ಭಕ್ತನಾದ ಹನುಮಂತನ ಜನ್ಮಸ್ಥಳ. ಈ ವಿಷಯದಲ್ಲಿ ನಮಗೆ ಹಾಗೂ ರಾಜ್ಯ ಸರಕಾರಕ್ಕೆ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿಗೆ ಅಂಜನಾದ್ರಿಗೆ ಭೇಟಿ ನೀಡಿ ಈಗಾಗಲೆ ಇದನ್ನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಪುರಾಣ ಇತಿಹಾಸದ ಬೆಂಬಲವಿಲ್ಲದೆ ಇಲ್ಲ ಸಲ್ಲದ ಘೋಷಣೆಗಳನ್ನು ಕೆಲವು ರಾಜ್ಯದ ಜನರು ಮಾಡುತ್ತಿದ್ದಾರೆ. ಆದರೆ, ಅಂಜನಾದ್ರಿಯೇ ಪುರಾಣ ಪ್ರಸಿದ್ದ ಆಂಜನೇಯನ ಜನ್ಮಸ್ಥಳ ಎನ್ನಲು ನಮ್ಮಲ್ಲಿ ಸಾಕಷ್ಟು ಪುರಾವೆಗಳು ಇವೆ ಎಂದರು.
BIG BREAKING NEWS: ಗೃಹ ಸಚಿವ ಅರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ
ಈಗಾಗಲೇ ಅಂಜನಾದ್ರಿಯ ಸಮಗ್ರ ಅಭಿವೃದ್ದಿಗೆ 120 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ದೇಶದ ಗಮನ ಸೆಳೆಯುವಂತಹ ಅಭಿವೃದ್ದಿಗೆ ನೀಲೀ ನಕ್ಷೆಯೂ ತಯಾರಾಗಿದೆ. ದಿನೇ ದಿನೇ ಅಂಜನಾದ್ರಿಗೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಪ್ರಥಮ ಆದ್ಯತೆ ಆಗಿದೆ. ದೇವಸ್ಥಾನದ ಅಭಿವೃದ್ದಿಯ ಬಗ್ಗೆ ಅಧಿಕಾರಿಗಳೊಂದಿಗೆ ಇಂದು ಚರ್ಚಿಸಿದ್ದೇನೆ. ಜಮೀನು ಕೊಡಲು ಕೆಲವು ರೈತರು ಹಿಂಜರಿಯುತ್ತಿರುವ ವಿಷಯವು ನಮ್ಮ ಗಮನಕ್ಕೆ ಬಂದಿದ್ದು, ಶೀಘ್ರ ಈ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಅನ್ನದಾಸೋಹಕ್ಕೆ ಮರು ಚಾಲನೆ: ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡುತ್ತಿರುವ ಆಂಜನಾದ್ರಿ ಬೆಟ್ಟದಲ್ಲಿ ಕರೋನಾ ಸಾಂಕ್ರಾಮಿಕದ ಕಾರಣದಿಂದ ಅನ್ನದಾಸೋಹವನ್ನು ನಿಲ್ಲಿಸಲಾಗಿತ್ತು. ಇಂದಿನಿಂದ ಆ ದಾಸೋಹವನ್ನು ಮರುಚಾಲನೆ ನೀಡಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.